ಏ.13 ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವಿಕಾಸಪರ್ವ

ಬೆಂಗಳೂರು, ಏ.11-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ವಿಕಾಸಪರ್ವ ಏ.13 ರಂದು ನಡೆಯಲಿದೆ.

ಅಂದು ಮಧ್ಯಾಹ್ನ 3 ಗಂಟೆಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಆಶ್ರಯ ನಗರದ ಬಿಬಿಎಂಪಿ ಆಟದ ಮೈದಾನದಲ್ಲಿ ವಿಕಾಸ ಪರ್ವದ ಅಂಗವಾಗಿ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ.

ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದಲ್ಲಿ ಸಮಾವೇಶದ ಸಿದ್ಧತೆ ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಈ ಕ್ಷೇತ್ರದ ಅಭ್ಯರ್ಥಿ ಯಾರೆಂಬ ಬಗ್ಗೆ ತೀವ್ರ ಕುತೂಹಲ ಕೆರಳಿಸಿದ್ದು, ಅಂದು ಅಭ್ಯರ್ಥಿ ಘೋಷಣೆಯಾಗುವ ಮೂಲಕ ಊಹಾಪೆÇೀಹಗಳಿಗೂ ತೆರೆ ಬೀಳಲಿದೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಈ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಜೆಡಿಎಸ್ ವರಿಷ್ಠರ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ನಡುವೆ ಬೆಂಗಳೂರು ಮಹಾನಗರ ಅಧ್ಯಕ್ಷ ಆರ್.ಪ್ರಕಾಶ್ ಅವರನ್ನು ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.

ಜೆಡಿಎಸ್ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಪಿ.ಜಿ.ಆರ್.ಸಿಂಧ್ಯಾ, ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಕ್ಷೇತ್ರದಲ್ಲಿ ಅಂದು ಜೆಡಿಎಸ್‍ನ ಶಕ್ತಿ ಪ್ರದರ್ಶನ ಮಾಡಲು ಉದ್ದೇಶಿಸಲಾಗಿದೆ ಎಂದು ಜೆಡಿಎಸ್‍ನ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ