![gangrape-pti](http://kannada.vartamitra.com/wp-content/uploads/2018/02/gangrape-pti-678x381.jpg)
ಲಾಹೋರ್, ಏ.11-ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಗಳು ಆತಂಕ ಮೂಡಿಸಿರುವಾಗಲೇ, ಮತ್ತೊಂದು ಬರ್ಬರ ಕೃತ್ಯ ವರದಿಯಾಗಿದೆ. ಎಂಟು ವರ್ಷದ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಜೀವಂತ ದಹನ ಮಾಡಿರುವ ಹೇಯ ಘಟನೆಯಿಂದ ಆ ಪ್ರಾಂತ್ಯ ಉದ್ವಿಗ್ನಗೊಂಡಿದೆ.
ಲಾಹೋರ್‍ನಿಂದ 200 ಕಿ.ಮೀ. ದೂರದಲ್ಲಿರುವ ಸಾಹಿವಾಲ್ ಜಿಲ್ಲೆಯ ಚಿಚಾವಟ್ನಿಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆ ಗ್ರೇಡ್-2 ವಿದ್ಯಾರ್ಥಿನಿ ಭಾನುವಾರ ಮನೆ ಹತ್ತಿರದ ಅಂಗಡಿಯಲ್ಲಿ ಸಿಹಿ ತಿಂಡಿ ತರಲು ಹೋಗಿದ್ದಳು. ನಂತರ ನಾಪತ್ತೆಯಾದ ಬಾಲಕಿಯನ್ನು ಪೆÇೀಷಕರು ಹುಡುಕುತ್ತಿದ್ದಾಗ ಮನೆಯಿಂದ ಕೊಂಚ ದೂರದ ರಸ್ತೆಯೊಂದರಲ್ಲಿ ಸುಟ್ಟಗಾಯಗಳೊಂದಿಗೆ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಇರುವುದು ಪತ್ತೆಯಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶೇ.70ರಷ್ಟು ಸುಟ್ಟ ಗಾಯಗಳಿಂದ ಬಾಲಕಿ ಮೃತಪಟ್ಟಳು.
ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿರುವುದು ಪತ್ತೆಯಾಗಿದೆ.
ಈ ಘಟನೆಯಿಂದ ಉದ್ರಿಕ್ತರಾದ ಚಿಚಾವಟ್ನಿ ಪ್ರದೇಶದ ಸಾರ್ವಜನಿಕರು ಜಿ.ಟಿ.ರಸ್ತೆಯಲ್ಲಿ ಹಲವು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.