ಧರ್ಮ-ಜಾತಿ ಪದ್ದತಿ ಇರುವವರೆಗೂ ನಾವು ಅಜ್ಞಾನದಿಂದ ಕೂಡಿರುತ್ತೇವೆ: ಪೆರಿಯಾರ್ ವಿಚಾರವಾದಿ ಕಲೈ ಶೆಲ್ವಿ ಅಭಿಪ್ರಾಯ

ಬೆಂಗಳೂರು, ಏ.11- ಧರ್ಮ-ಜಾತಿ ಪದ್ದತಿ ಎಲ್ಲಿಯವರೆಗೂ ಆಚರಣೆಯಲ್ಲಿರುತ್ತದೆಯೋ ಅಲ್ಲಿಯವರೆಗೂ ನಾವು ಅಜ್ಞಾನದಿಂದ ಕೂಡಿರುತ್ತೇವೆ ಎಂದು ಪೆರಿಯಾರ್ ವಿಚಾರವಾದಿ ಕಲೈ ಶೆಲ್ವಿ ಅಭಿಪ್ರಾಯಪಟ್ಟರು.

ನಗರದಲ್ಲಿಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಮಹಾತ್ಮ ಜ್ಯೋತಿ ಬಾಪುಲೆ ಅವರ 191ನೇ ಜನ್ಮ ದಿನೋತ್ಸವದ ಅಂಗವಾಗಿ ನಡೆದ ಜ್ಞಾನ ಪ್ರಚಾರ ಐಕ್ಯತೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೇಷ್ಠರು-ಶೋಷಿತರು, ಮೇಲು-ಕೀಳು ಎಂಬ ಬೇಧಭಾವದಿಂದ ಹಿಂದು ಧರ್ಮದಲ್ಲಿ ದಲಿತರಿಗೆ ಸಮಾನತೆ ದೊರೆಯುವುದಿಲ್ಲ ಎಂದು ವಿಷಾದಿಸಿದರು.
ಬಾಪುಲೆ ಮತ್ತು ಅಂಬೇಡ್ಕರ್ ಅವರು ಸಮಾನತೆಗಾಗಿ ಹೋರಾಟ ನಡೆಸಿದವರು. ಮನುವಾದದ ವಿರೋಧವಾಗಿ ನಡೆದುಕೊಂಡವರು ಜನಿವಾರ ಧರಿಸುವವರು ಶ್ರೇಷ್ಠರು ಎನ್ನುವುದನ್ನು ಅಲ್ಲಗೆಳೆದು ಎಲ್ಲರೂ ಶ್ರೇಷ್ಠರು ಎಲ್ಲರೂ ಸಮಾನರು ಎಂಬುವುದನ್ನು ಪ್ರತಿಪಾದಿಸಿದವರು ಎಂದರು.

ಮನುವಾದ ನಿಷೇಧಕ್ಕಾಗಿ ಹೋರಾಟ ನಡೆಸಲು ಮುಂದಾಗಿದ್ದ ಜ್ಯೋತಿ ಬಾಪುಲೆ ಮತ್ತು ಅಂಬೇಡ್ಕರ್ ಅವರು ಪ್ರತಿ ದಲಿತ ಮನೆಯ ಕುಲದೇವರಾಗಬೇಕು ಎಂದರು.
ಮೊದಲಿಗೆ ದಲಿತರ ಮನಸ್ಥಿತಿ ಬದಲಾಗಬೇಕು. ಅಂಬೇಡ್ಕರ್ ಮತ್ತು ಜ್ಯೋತಿ ಬಾಪುಲೆ ಅವರ ಪರಿಶ್ರಮದ ಫಲಾನುಭವಿಗಳು ನಾವು. ಆದರೂ ಸಹ ಅವರನ್ನು ಹೆಚ್ಚು ಆಧರಿಸದೇ ಇರುವುದು ನಮಗೆ ನಾವು ಮಾಡಿಕೊಂಡ ದ್ರೋಹ ಎಂದರು.

ಮೌಢ್ಯ ತುಂಬಿದ ಜಗತ್ತಿನಲ್ಲಿ ನಾವು ಇದ್ದೇವೆ. ಹೆಣ್ಣು ಮಕ್ಕಳಿಗೆ ವಿದ್ಯೆ ಸಿಗಬೇಕೆಂದು ಹೋರಾಟ ಮಾಡಿದ ಅಂಬೇಡ್ಕರ್ ಮತ್ತು ಬಾಪುಲೆ ಅವರು ಹೋರಾಟಗಾರರಲ್ಲವೆ ಎಂದು ಪ್ರಶ್ನಿಸಿದ ಅವರು, ಇವರ ಪ್ರತಿಮೆಗಳು ಏಕೆ ಹೆಚ್ಚು ಕಡೆ ಇಲ್ಲ ಎಂದರು.

ಹೈಕೋರ್ಟ್ ವಕೀಲ ವಿಜಯಕುಮಾರ್ ಮಾತನಾಡಿ, ಇಂದಿನ ಕಾಲದಲ್ಲಿ ನ್ಯಾಯನೀತಿಗೆ ಬೆಲೆ ಇಲ್ಲ. ಜಾತಿ, ಹಣ, ರಾಜಕೀಯ ಬಲಾಢ್ಯರಿಂದ ಸಮಾಜ ತುಂಬಿದೆ. ಇದನ್ನು ತೊಡೆದು ಹಾಕಲು ಅಂಬೇಡ್ಕರ್, ಜ್ಯೋತಿ ಬಾಪುಲೆ, ಬಸವಣ್ಣ ಮತ್ತು ಪೆರಿಯಾರ್ ಅವರ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ನ್ಯಾಯನೀತಿ ತಲೆ ಎತ್ತಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಸಂಸದ ರಾಜ್ಯಾಧ್ಯಕ್ಷ ಎಚ್.ಮಾರಪ್ಪ , ರಾಜ್ಯ ಗೌರವ ಅಧ್ಯಕ್ಷ ತಮ್ಮಯ್ಯ, ರಾಜ್ಯ ಸಂಘಟನಾ ಸಂಚಾಲಕ ಮುನಿರಾಜು, ರಮೇಶ್ ಮುಂತಾದವರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ