ಚಿಕ್ಕಮಗಳೂರು, ಏ.10-ಬಾಬಾಬುಡನ್‍ಗಿರಿ ಇನಾಂ ದತ್ತಾತ್ರೇಯ ಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಪ್ರೇರಿತ ನಿರ್ಧಾರ ಕೈಗೊಂಡಿರುವುದಕ್ಕೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ನಾಗಮೋಹನ್‍ದಾಸ್ ಸಮಿತಿ ನೀಡಿದ ವರದಿಯನ್ನು ಚುನಾವಣಾ ಘೋಷಣೆ ನಂತರ ಸುಪ್ರೀಂಕೋರ್ಟ್ ಸಲ್ಲಿಸಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಅಲ್ಲದೆ, ಈ ವರದಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದ ವಿನಃ ಯಾವುದೇ ತೀರ್ಪು ನೀಡಿಲ್ಲ. ಆದರೆ ಇದೇ ಅಂತಿಮ ತೀರ್ಪು ಎಂಬಂತೆ ಬಿಂಬಿಸಲಾಗಿದೆ. ಹಾಗಾಗಿ ನಾವು ಈ ವಿಚಾರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.
ನಾಗಮೋಹನ್‍ದಾಸ್ ಸಮಿತಿಗೆ ವಾಸ್ತವವಾಗಿ ಹೊಸ ವರದಿಯನ್ನು ನೀಡುವ ಅಧಿಕಾರ ಇಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ.
ದತ್ತಪೀಠದಲ್ಲಿ ಹಣ ಹಾಗೂ ಭೂಮಿ ಅಕ್ರಮದ ಆರೋಪ ಎದುರಿಸುತ್ತಿರುವ ಶಾಕಾದ್ರಿ ಅವರಿಗೆ ಯಾವುದೇ ಕಾರಣಕ್ಕೂ ಆಡಳಿತವನ್ನು ವಹಿಸಿಕೊಡಬಾರದು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ದತ್ತಪೀಠ ವಿಚಾರದಲ್ಲಿ ಜನತಾ ನ್ಯಾಯಾಲಯಕ್ಕೆ ಚುನಾವಣಾ ಸಂದರ್ಭದಲ್ಲಿ ಕೊಂಡೊಯ್ಯುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಕಂದಾಯ ಇಲಾಖೆಯ ಎಲ್ಲಾ ದಾಖಲೆಯಲ್ಲಿ ದತ್ತಪೀಠಕ್ಕೆ ಸೇರಿರುವ ಈ ಗುಹೆಯನ್ನು ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಮತಬ್ಯಾಂಕ್ ರಾಜಕಾರಣ ಮಾಡಲು ವರದಿಯನ್ನು ಸಿದ್ದಪಡಿಸಿ ತರಾತುರಿಯಲ್ಲಿ ಸುಪ್ರೀಂಗೆ ಸಲ್ಲಿಸಿರುವುದು ಎಷ್ಟು ಸರಿ ಇದು ಸಾರ್ವಜನಿಕವಾಗಿ ಚರ್ಚೆಯಾಗಲಿ ಎಂದು ಹೇಳಿದರು.
ನ್ಯಾಯಾಲಯ ಹಾಗೂ ಗೆಜೆಟೆಡ್‍ಗಳಲ್ಲಿರುವ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿ ಇಷ್ಟೆಲ್ಲ ದಾಖಲೆಗಳಿದ್ದರೂ ಸರ್ಕಾರ ಬಹುಸಂಖ್ಯಾತರಿಗೆ ಅನ್ಯಾಯ ಮಾಡಿದೆ ಎಂದರು.
ದತ್ತಪೀಠಕ್ಕೆ ಸಂಬಂಧಿಸಿದಂತೆ ಮಾತನಾಡುವ ಮುತಾಲಿಕ್ ಕೇವಲ ವರ್ಷಕ್ಕೊವೆÅ್ಮ ದತ್ತಪೀಠಕ್ಕೆ ಬಂದು ಹೋಗುತ್ತಾರೆ. ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದಾರೆಯೇ? ಸತ್ಯ ಹೇಳಬೇಕೆಂದರೆ ದತ್ತಪೀಠದ ಬಗ್ಗೆ ಮಾತನಾಡಲು ಮೈಕ್ ಹಾಕಿಕೊಟ್ಟಿದ್ದೇ ನಾವು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ತಮ್ಮಯ್ಯ, ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಉಪಸ್ಥಿತರಿದ್ದರು.