ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ಕಸದ ಬುಟ್ಟಿಗೆ ಹಾಕುವ ವದಂತಿಗೆ ಸಮ: ಎಸ್.ಎಂ.ಕೃಷ್ಣ ಸ್ಪಷ್ಟನೆ

ಬೆಂಗಳೂರು,ಏ.10- ಯಾವುದೇ ಕಾರಣಕ್ಕೂ ನಾನು ಈಗಿರುವ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ಕಸದ ಬುಟ್ಟಿಗೆ ಹಾಕುವ ವದಂತಿಗೆ ಸಮ ಎಂದು ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಮುಂಬೈ ನಲ್ಲಿರುವ ಎಸ್.ಎಂ.ಕೃಷ್ಣ ಅವರು ದೂರವಾಣಿ ಮೂಲಕ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿ, ತಾವು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಹಾಗಾಗಿ ನಾನು ಕಾಂಗ್ರೆಸ್ ಸೇರಲು ಮುಂದಾಗಿದ್ದೇನೆ. ಇದಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದಾರೆ ಎಂಬುದು ಗಾಳಿ ಸುದ್ದಿ. ಇದಕ್ಕೆಲ್ಲ ಯಾರೂ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಎಂತಹ ಸಂದರ್ಭದಲ್ಲೂ ಬಿಜೆಪಿ ಬಿಟ್ಟು ನಾನು ಕಾಂಗ್ರೆಸ್‍ಗೆ ಹೋಗುವುದಿಲ್ಲ. ನನ್ನ ಆರೋಗ್ಯ ಸಹಕರಿಸಿದರೆ ಈ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ. ಬಿಜೆಪಿಯಲ್ಲಿ ಎಲ್ಲ ಸರಿ ಇರುವಾಗಿ ಬೇರೆ ಪಕ್ಷವನ್ನು ಏಕೆ ಸೇರಬೇಕು ಎಂದು ಕೃಷ್ಣ ಪ್ರಶ್ನಿಸಿದರು.

ನನ್ನ ಕುಟುಂಬದ ಯಾವುದೇ ಸದಸ್ಯರಿಗೆ ಟಿಕೆಟ್ ನೀಡಬೇಕೆಂದು ನಾನಾಗಲಿ ಅಥವಾ ಬೇರೆ ಯಾರೂ ಕೂಡ ಲಾಬಿ ನಡೆಸಿಲ್ಲ. ಅವರವರ ಸಾಮಥ್ರ್ಯಕ್ಕೆ ಅನುಗುಣವಾಗಿ ಪಕ್ಷದ ಮುಖಂಡರು ಟಿಕೆಟ್ ನೀಡುತ್ತಾರೆ.

ನಮ್ಮ ಪುತ್ರಿ ಅಥವಾ ಬೇರೆ ಯಾರೇ ರಾಜಕೀಯಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಷಯ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಕೆಲವು ಆಗದವರು ಆಗಾಗ್ಗೆ ಇಂತಹ ವದಂತಿಗಳನ್ನು ಹಬ್ಬಿಸುತ್ತಾರೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

ರಾಜಕಾರಣ ನಿಂತ ನೀರಲ್ಲ. ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಕೊಂಡು ಹೋಗಲೇಬೇಕಾಗುತ್ತದೆ. ನನ್ನಿಂದಲೇ ಎಲ್ಲವೂ ನಡೆಯುವುದಿಲ್ಲ ಎಂಬ ಸತ್ಯವನ್ನು ಅರಿತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ನನಗೆ ಗುಲಗಂಜಿಯಷ್ಟು ಅಪನಂಬಿಕೆ ಇಲ್ಲ. ಇಂತಹ ಗಾಳಿ ಸುದ್ದಿಗಳು ಹಬ್ಬಿದಷ್ಟು ಬೇಗ ಮಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಎಸ್.ಎಂ.ಕೃಷ್ಣ ಪುನಃ ತಮ್ಮ ಮಾತೃ ಪಕ್ಷವಾದ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದ್ದಂತಿ ಹಬ್ಬಿತ್ತು. ತಮ್ಮ ಪುತ್ರಿ ಶಾಂಭವಿಗೆ ಬೆಂಗಳೂರಿನ ರಾಜಾರಾಜೇಶ್ವರಿ ನಗರ ಇಲ್ಲವೇ ತಮ್ಮ ತವರು ಜಿಲ್ಲೆ ಮಂಡ್ಯದ ಮದ್ದೂರಿನಿಂದ ಬಿಜೆಪಿ ಟಿಕೆಟ್ ಕೇಳಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಕೇಂದ್ರ ನಾಯಕರು ಕೃಷ್ಣ ಅವರಿಗೆ ಮಾತಿಗೆ ಸೊಪ್ಪು ಹಾಕಿಲ್ಲ. ಬದಲಿಗೆ ತುಳಸೀ ಮುನಿರಾಜು ಗೌಡ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಬೇಸರಗೊಂಡ ಕೃಷ್ಣ ಕೈನತ್ತ ಮುಖ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೀಗಾಗಿ ಎಲ್ಲ ವದ್ದಂತಿಗಳಿಗೂ ಎಸ್.ಎಂ.ಕೃಷ್ಣ ಅವರೇ ಖುದ್ದು ತೆರೆ ಎಳೆದಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ