ಏ.17ರಂದು ರಾಜ್ಯ ಮಟ್ಟದ ವಕೀಲರ ಬೃಹತ್ ಸಮಾವೇಶ

ಬೆಂಗಳೂರು,ಏ.10- ಜೆಡಿಎಸ್ ಕಾನೂನು ಘಟಕದ ವತಿಯಿಂದ ರಾಜ್ಯ ಮಟ್ಟದ ವಕೀಲರ ಬೃಹತ್ ಸಮಾವೇಶ ಏ.17ರಂದು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿ ತೊಡಗಿರುವ ಜೆಡಿಎಸ್ ವಕೀಲ ಸಮುದಾಯದಿಂದ ಸಲಹೆ ಸಹಕಾರ ಪಡೆಯುವುದರ ಜೊತೆಗೆ ವಕೀಲರಿಗೆ ಸಲ್ಲಬೇಕಾಗಿರುವ ಸೌಲಭ್ಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.

ಈಗಾಗಲೇ ಆಟೋ ಚಾಲಕರು, ಹಿರಿಯ ನಾಗರಿಕರು ಸೇರಿದಂತೆ ವಿವಿಧ ಸಮುದಾಯ ಆಧಾರಿತ ಸಭೆಗಳನ್ನು ನಡೆಸಿ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಲಿಸಿರುವ ಜೆಡಿಎಸ್ ಈಗ ವಕೀಲರ ಅಭಿಪ್ರಾಯಗಳನ್ನು ಆಲಿಸಲು ಮುಂದಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯುವ ವಕೀಲರಿಗೆ ಮಾಸಿಕ 2000 ರೂ. ಸ್ಟೈಫಂಡ್ ನೀಡಿದ್ದು , ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಹೈಕೋರ್ಟ್‍ನ ಸಂಚಾರಿ ಪೀಠ ಸ್ಥಾಪನೆ ಸೇರಿದಂತೆ ನ್ಯಾಯಾಲಯಗಳಿಗೆ ಕಲ್ಪಿಸಿದ್ದ ಮೂಲಸೌಕರ್ಯಗಳ ಬಗ್ಗೆ ವಕೀಲರಿಗೆ ಮನವರಿಕೆ ಮಾಡಿಕೊಡಲು ಉದ್ದೇಶಿಸಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನಾಶೀರ್ವಾದ ಪಡೆದು ಅಧಿಕಾರಕ್ಕೆ ಬಂದರೆ ವಕೀಲರ ಸಮುದಾಯಕ್ಕೆ ನೀಡಲಿರುವ ಕೊಡುಗೆಗಳ ಭರವಸೆಗಳನ್ನು ಸಮಾವೇಶದಲ್ಲಿ ಪ್ರಸ್ತಾಪಿಸಲಾಗುತ್ತದೆ.

ವಕೀಲ ಸಮುದಾಯ ಜೆಡಿಎಸ್ ಬೆಂಬಲಿಸುವಂತೆ ಈಗಾಗಲೇ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಏ.17ರಂದು ಅರಮನೆ ಮೈದಾನದಲ್ಲಿ ಜರುಗುವ ರಾಜ್ಯ ಮಟ್ಟದ ವಕೀಲರ ಸಮಾವೇಶದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ