ಬೆಂಗಳೂರು,ಏ.10- ಹಿಂದೂ ದೇವಾಲಯಗಳ ಮೇಲಿರುವ ಓಂ ಗುರುತು , ಮನೆ ಗೋಡೆ ಮೇಲಿರುವ ಪಕ್ಷದ ಬರಹಗಳನ್ನು ಅಳಿಸಬಾರದು ಹಾಗೂ ಕಾಂಗ್ರೆಸ್ ಜೊತೆ ಕೆಲ ಅಧಿಕಾರಿಗಳು ಶಾಮೀಲಾಗಿರುವವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿತು.
ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಅನಂತಕುಮಾರ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಮುಖಂಡರಾದ ಆರ್.ಅಶೋಕ್, ಅಶ್ವಥ್ ನಾರಾಯಣ್, ಎ.ಎಚ್.ಆನಂದ್ ಸೇರಿದಂತೆ ಮತ್ತಿತರರು ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಹಿಂದು ದೇವಾಲಯಗಳ ಮೇಲೆ ಓಂ ಎಂದು ಬರೆದಿದ್ದಾರೆ. ಚುನಾವಣಾ ಅಧಿಕಾರಿಗಳು ಅದನ್ನೂ ತೆಗೆದು ಹಾಕುವಂತೆ ಅರ್ಚಕರಿಗೆ ಸೂಚನೆ ನೀಡಿದ್ದಾರೆ. ದೇವಾಲಯದ ಮೇಲಿರುವ ಗುರುತಿಗೂ, ಚುನಾವಣೆಗೂ ಸಂಬಂಧವಿದೆಯೇ ಎಂದು ಪ್ರಶ್ನಿಸಿದರು.
ದೇವಾಲಯಗಳು ಪಕ್ಷಾತೀತವಾಗಿರುತ್ತವೆ. ಓಂ ಗುರುತು ಇದ್ದ ತಕ್ಷಣ ಜನರು ಬಿಜೆಪಿಗೆ ಮತ ಹಾಕುವುದಿಲ್ಲ. ಧಾರ್ಮಿಕ ಕೇಂದ್ರಗಳಿಗಾಗಲಿ ಅಥವಾ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ನಿಯಮವಿದೆ. ಹಾಗಿದ್ದರೂ ಚುನಾವಣಾಧಿಕಾರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದರು.
ಆರು ತಿಂಗಳ ಹಿಂದೆಯೇ ನಮ್ಮ ಪಕ್ಷದ ಕಾರ್ಯಕರ್ತರ ಮನೆಗಳ ಮೇಲೆ ಈ ಬಾರಿ ಬಿಜೆಪಿ ಎಂದು ಗೋಡೆ ಬರಹ ಬರೆಯಲಾಗಿತ್ತು. ಆದರೆ ಚುನಾವಣಾಧಿಕಾರಿಗಳು ಇದಕ್ಕೂ ತಕರಾರು ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮನೆ ಗೋಡೆ ಮೇಲೆ ಬರಹ ಬರೆದರೆ ಅದು ಹೇಗೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಪ್ರಶ್ನಿಸಿದರು.
ಯಾವುದೇ ಗೋಡೆ ಬರಹವನ್ನು ತೆರವುಗೊಳಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್ ನೀಡಬೇಕು. ಇದಕ್ಕೆ ನೀಡುವ ಉತ್ತರ ಸಮರ್ಪಕವಾಗಿ ಇರದಿದ್ದರೆ ಕ್ರಮ ಜರುಗಿಸಲು ಅವಕಾಶವಿರುತ್ತದೆ. ಆದರೆ ಅಧಿಕಾರಿಗಳು ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರಾವಳಿ ಜಿಲ್ಲೆ ಸೇರಿದಂತೆ ಮತ್ತಿತರ ಕಡೆ ಹಿಂದೂ ಸಂಘಟನೆ ಕೆಲ ಕಾರ್ಯಕರ್ತರನ್ನು ಗಡಿಪಾರು ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಯಾವುದೇ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದರೆ ನಿರ್ದಿಷ್ಟ ಕಾರಣಗಳಿರಬೇಕು. ಸುಖಾಸುಮ್ಮನೆ ಗಡಿಪಾಡು ಮಾಡಲು ಅವಕಾಶವಿಲ್ಲ ಎಂದ ಅಶೋಕ್, ಕೆಲವರಿಗೆ ಯಾವ ಕಾರಣಕ್ಕಾಗಿ ಗಡಿಪಾರು ಮಾಡುವ ಬಗ್ಗೆ ಬೆದರಿಕೆ ಹಾಕುತ್ತಿದ್ದಾರೆ ಎಂದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದಾಗಿ ಚುನಾವಣಾಧಿಕಾರಿಗಳು ಹೇಳುತ್ತಿದ್ದಾರೆ. ವಾಸ್ತವವಾಗಿ ಕೆಲ ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಂಥವರ ವಿರುದ್ದ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮೂರು ತಿಂಗಳ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬೇಕಾದ ಚೇಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು. ಅವರ ಋಣ ತೀರಿಸಲು ಮುಂದಾಗಿರುವ ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಂಥವರನ್ನು ಎತ್ತಂಗಡಿ ಮಾಡುವಂತೆ ಒತ್ತಾಯಿಸಿದರು.
ಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ಗೋಣಿಚೀಲಗಳಲ್ಲಿ ಕುಕ್ಕರ್, ಮಿಕ್ಸಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಮನೆ ಮುಂದೆ ಇಟ್ಟು ನಮಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಚುನಾವಣಾಧಿಕಾರಿಗಳು, ತಹಸೀಲ್ದಾರ್ಗಳು ಸೇರಿದಂತೆ ಕೆಲವು ಕಡೆ ಅಧಿಕಾರಿಗಳ ಮನೋಭಾವನೆ ಬದಲಾಗಿಲ್ಲ. ತಾವು ಸರ್ಕಾರದ ಅಧೀನದಲ್ಲಿ ಇರಬೇಕೆಂದು ಭಾವಿಸಿದ್ದಾರೆ. ಅಂಥವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದರು.
ಎಸ್ಎಂಕೆ ಪಕ್ಷ ಬಿಡಲ್ಲ:
ಯಾವುದೇ ಕಾರಣಕ್ಕೂ ಪಕ್ಷದ ಹಿರಿಯರಾದ ಎಸ್.ಎಂ.ಕೃಷ್ಣ ಅವರು ಬಿಜೆಪಿಯನ್ನು ತೊರೆಯುವುದಿಲ್ಲ. ಬಿಜೆಪಿಯನ್ನು ಬಿಡಲಿದ್ದಾರೆ ಎಂಬ ವದಂತಿಗಳು ಆಧಾರರಹಿತ. ಏ.13ರಂದು ನಗರಕ್ಕೆ ಬರಲಿದ್ದಾರೆ ಎಂದರು.
ಈಗಲಾದರೂ ಎಸ್ಎಂಕೆ ಅವರು ನೆನಪಾಗಿರುವುದು ಒಳ್ಳೆ ಬೆಳವಣಿಗೆ. ಅವರನ್ನು ಬಳಸಿ ಬಿಸಾಕಿ ಈಗ ಅನುಕಂಪ ತೋರಿಸುತ್ತಿದ್ದಾರೆ. ದೇವರು ಈಗಲಾದರೂ ಬುದ್ದಿ ಕೊಟ್ಟನಲ್ಲ ಎಂದು ಹೇಳಿದರು.
ಹಲವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನನ್ನ ಹಾಗೂ ನಮ್ಮ ಪಕ್ಷದ ಮುಖಂಡರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾರೇ ಆರೋಪ ಮಾಡಿದರೂ ಸ್ವಾಗತಿಸುವುದಾಗಿ ಹೇಳಿದರು.