ಬೆಂಗಳೂರು, ಏ.10-ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದ ಆರು ಅಧಿಕಾರಿಗಳ ಮನೆ ಸೇರಿದಂತೆ 22 ಸ್ಥಳಗಳಲ್ಲಿ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಪತ್ತೆಹಚ್ಚಿದ್ದಾರೆ.
ಹುಬ್ಬಳ್ಳಿ ಕೆಪಿಟಿಸಿಎಲ್ ಕಚೇರಿ ಸಹಾಯಕ ಕಾರ್ಯಪಾಲಕ ಅಭಿಯಂತ ಮಲ್ಲಿಕಾರ್ಜುನ್ ಎನ್.ಸವಣೂರ, ಧಾರವಾಡ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರೀಶ್ವನಾಥ ವರೂರ, ಕುಂದಾಪುರ ತಾಪಂ ಜೂನಿಯರ್ ಎಂಜಿನಿಯರ್ ರವಿಶಂಕರ, ಬಿಬಿಎಂಪಿಯ ಹೆಮ್ಮಿಗೆಪುರ ವಾರ್ಡ್ನ ಕಂದಾಯ ನಿರೀಕ್ಷಕ ಶಿವಕುಮಾರ್ ಜಿ.ಎಂ., ಮೈಸೂರು ಸಿಟಿ ಕಾಪೆರ್Çರೇಷನ್ ವಾಟರ್ ಇನ್ಸ್ಪೆಕ್ಟರ್ ಕೃಷ್ಣೇಗೌಡ ಹಾಗೂ ದಾವಣಗೆರೆ ಗುರುಸಿದ್ದಾಪುರ ಗ್ರಾಪಂ ಪಿಡಿಒ ನಾಗರಾಜ್ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು.
ದಾಳಿಗೆ ಒಳಗಾಗಿರುವ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ಭ್ರಷ್ಟಾಚಾರ ನಡೆಸಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ಬಂದ ದೂರನ್ನಾಧರಿಸಿ ಈ ದಾಳಿ ನಡೆಸಲಾಗಿದೆ.
ಆರು ಅಧಿಕಾರಿಗಳ ವಿರುದ್ಧ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಕಾರ್ಯಾಚರಣೆಗಳಿದ ಎಸಿಬಿ ಅಧಿಕಾರಿಗಳು ಭ್ರಷ್ಟರ ಮನೆ ಮತ್ತು ಕಚೇರಿ ಸೇರಿದಂತೆ 22 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಭ್ರಷ್ಟ ಅಧಿಕಾರಿಗಳು ತಮ್ಮ ಆಸ್ತಿಗಿಂತ ಮೂರು ಪಟ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ದಾಖಲೆ ಪತ್ರಗಳು ಮತ್ತಿತರ ವಸ್ತುಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.