ಮಹಿಳಾ ಮತದಾರರಿಗಾಗಿ ಗುಲಾಬಿ ಬಣ್ಣದ ಮತಗಟ್ಟೆ ; ಚುನಾವಣಾ ಆಯೋಗದ ವಿನೂತನ ಪ್ರಯೋಗ

ಬೆಂಗಳೂರು, ಏ.9- ಮಹಿಳಾ ಮತದಾರರು ಹೆಚ್ಚಾಗಿರುವ ಮತಗಟ್ಟೆ ಕೇಂದ್ರವನ್ನು ಸಂಪೂರ್ಣ ಗುಲಾಬಿ ಬಣ್ಣದಿಂದ ಅಲಂಕರಿಸಿ ಮತದಾರರನ್ನು ಆಕರ್ಷಿಸುವ ವಿನೂತನ ಪ್ರಯೋಗವನ್ನು ಭಾರತದ ಚುನಾವಣಾ ಆಯೋಗ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಡಲಿದೆ.

ಭದ್ರತಾ ಸಿಬ್ಬಂದಿ, ಮತಗಟ್ಟೆ ಸಿಬ್ಬಂದಿ ಸೇರಿದಂತೆ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವಂತಹ ಮತಗಟ್ಟೆ ಇದಾಗಿದ್ದು, ಇದಕ್ಕೆ ಸಖಿ ಪಿಂಕ್ ಎಂಬ ಹೆಸರನ್ನಿಡಲಾಗಿದೆ.
ಮಹಿಳಾ ಮತದಾರರನ್ನು ಆಕರ್ಷಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದ್ದು, ವಿಧಾನಸಭೆಗೆ ಮತದಾನ ನಡೆಯುವ ಮೇ 12 ರಂದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಒಂದರಂತೆ ಪಿಂಕ್ ಮತಗಟ್ಟೆ ಕೇಂದ್ರವನ್ನು ತೆರೆಯಲಾಗುತ್ತದೆ.
ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೆ ಒಂದಕ್ಕಿಂತ ಹೆಚ್ಚು ಪಿಂಕ್ ಮತಗಟ್ಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತೆರೆಯಲಾಗುತ್ತದೆ. ಸುಮಾರು 450ರಷ್ಟು ಸಖಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸುವ ಗುರಿಯನ್ನು ಚುನಾವಣಾ ಆಯೋಗ ಹೊಂದಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಬಹಳ ಮಹತ್ವ ಪಡೆದಿರುವುದನ್ನು ಅರಿತಿದ್ದು, ಯಾರೊಬ್ಬರೂ ಕೂಡ ಮತದಾನದಿಂದ ವಂಚಿತವಾಗಬಾರದು ಹಾಗೂ ಉತ್ಸಾಹದಿಂದ ಮತ ಚಲಾಯಿಸುವಂತಾಗಬೇಕು ಎಂಬ ಉದ್ದೇಶದಿಂದ ಪಿಂಕ್ ಮತಗಟ್ಟೆಯನ್ನು ತೆರೆಯಲಾಗುತ್ತಿದೆ. ಮುಕ್ತ ಮತದಾನಕ್ಕೆ ಇದು ಪ್ರೇರಣೆ ನೀಡಲಿದೆ ಎಂಬ ಭಾವನೆ ಆಯೋಗದಲ್ಲಿದ್ದು, ಮಹಿಳಾ ಮತದಾರರು ಉತ್ಸಾಹದಿಂದ ಹಾಗೂ ಹೆಮ್ಮೆಯಿಂದ ಮತ ಚಲಾಯಿಸಲು ಅನುಕೂಲವಾಗುತ್ತದೆ ಎಂದು ಭಾವಿಸಲಾಗಿದೆ.

ಕಳೆದ ಜ.1 ರಂದು 18 ವರ್ಷ ತುಂಬಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮತದಾನ ಮಾಡುವ ಹಕ್ಕು ಪಡೆಯಲು ಅವಕಾಶವಿದೆ. ಮತದಾನದಂದು ಮತದಾರರು ತಮ್ಮ ಹಕ್ಕು ಚಲಾಯಿಸುವ ಹಾಗೂ ಕರ್ತವ್ಯವನ್ನು ಪಾಲಿಸುವ ಮೂಲಕ ತಮಗಿಷ್ಟ ಬಂದ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

ಮತದಾನದ ಪ್ರಕ್ರಿಯೆಯಲ್ಲಿ ಮಹಿಳಾ ಮತದಾನ ಕಡಿಮೆ ಇರುವ ವಾಸ್ತವ ಸಂಗತಿಯನ್ನು ಅರಿತ ಚುನಾವಣಾ ಆಯೋಗ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಅರ್ಹ ಮಹಿಳಾ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅದಕ್ಕೆ ಪೂರಕವಾದ ಉತ್ತೇಜನಕಾರಿ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸಖಿ ಪಿಂಕ್ ಮತಕೇಂದ್ರವನ್ನು ವಿಶೇಷವಾಗಿ ಸ್ಥಾಪಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ