![congress-stry-647_102217114740_0](http://kannada.vartamitra.com/wp-content/uploads/2018/03/congress-stry-647_102217114740_0-610x381.jpg)
ಬೆಂಗಳೂರು, ಏ.9- ಕಳೆದ ಬಾರಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಹುತೇಕ ಭರವಸೆಗಳನ್ನು ಈಡೇರಿಸಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಬಾರಿಯೂ ಕಾರ್ಯಸಾಧುವಾದಂತಹ ಜನಪರ ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು, ಅಂತಿಮ ಟಚ್ ನೀಡುತ್ತಿದೆ.
ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪಮೊಯ್ಲಿ ನೇತೃತ್ವದ ಪ್ರಣಾಳಿಕೆ ಸಮಿತಿ ಪ್ರಣಾಳಿಕೆಯ ರೂಪುರೇಷೆಗಳನ್ನು ಅಂತಿಮಗೊಳಿಸಿದ್ದು, ರಾಹುಲ್ಗಾಂಧಿ ಅವರು ನಡೆಸಿದ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ರೈತರು, ಕಾರ್ಮಿಕರು, ಉದ್ಯಮಿಗಳು, ಭಾಗಿದಾರರೊಂದಿಗೆ ನಡೆಸಿದ ಸಂವಾದದ ಸಂದರ್ಭದಲ್ಲಿ ಆಲಿಸಿದ ಅಹವಾಲುಗಳನ್ನೂ ಸೇರಿಸಿ ಭರವಸೆಗಳನ್ನು ನಾಡಿನ ಜನಕ್ಕೆ ನೀಡುವ ಹಿನ್ನೆಲೆಯಲ್ಲಿ ಪ್ರಣಾಳಿಕೆಗೆ ಹೊಸ ರೂಪ ಕೊಡಲಿದ್ದಾರೆ.
ಚುನಾವಣಾ ಪ್ರಣಾಳಿಕೆ ಕೇವಲ ಪ್ರಚಾರಕ್ಕೆ ಭರವಸೆಯ ತಂತ್ರವಾಗಿರುತ್ತಿತ್ತು. ಯಾವುದೇ ಸರ್ಕಾರಗಳು ಅದನ್ನು ಬಜೆಟ್ನಲ್ಲಿ ಅಳವಡಿಸಿಕೊಳ್ಳುತ್ತಿರಲಿಲ್ಲ ಮತ್ತು ಈಡೇರಿಸಲು ಅಷ್ಟಾಗಿ ಮನಸ್ಸು ಮಾಡುತ್ತಿರಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು 2013ರ ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷ ಜನರಿಗೆ ನೀಡಿದ ಪ್ರಣಾಳಿಕೆಯ ಅಂಶಗಳನ್ನು ಬಜೆಟ್ನಲ್ಲಿ ಅಳವಡಿಸಿಕೊಂಡಿದ್ದಲ್ಲದೆ ಶೇ.95ರಷ್ಟು ಬೇಡಿಕೆಗಳನ್ನು ಈಡೇರಿಸಿ ಯಶಸ್ವಿಯಾಗಿದ್ದರು.
ಹಾಗಾಗಿ ಈ ಬಾರಿ ಕಾಂಗ್ರೆಸ್ ಬಿಡುಗಡೆ ಮಾಡಲಿರುವ ಪ್ರಣಾಳಿಕೆ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದೆ. ಮೌಲ್ಯಯುತವಾದ ಕಾರ್ಯಸಾಧುವಾದ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಲು ಮುಂದಾಗಿದೆ.
ನವ ಕರ್ನಾಟಕಕ್ಕೆ ಸಿದ್ಧ ಸರ್ಕಾರ ಎಂಬ ಭವಿಷ್ಯದ ಯೋಜನೆಗಳನ್ನು ರೂಪಿಸಿ ಜನತೆಯ ಮುಂದಿಡಲಿದೆ. ಈ ಮೊದಲು ರಾಜ್ಯ ಮತ್ತು ಬೆಂಗಳೂರಿಗೆ ಮಾತ್ರ ಪ್ರಣಾಳಿಕೆ ಸೀಮಿತವಾಗಿರುತ್ತಿತ್ತು. ಆದರೆ, ಈಗ ಮೂರು ಹಂತಗಳಲ್ಲಿ ಪ್ರಣಾಳಿಕೆಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ರಾಜ್ಯಮಟ್ಟ, ಬೆಂಗಳೂರು, ಐದು ಕಂದಾಯ ವಿಭಾಗಗಳು ಮತ್ತು ಜಿಲ್ಲಾಮಟ್ಟಕ್ಕೆ ಪ್ರತ್ಯೇಕವಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು,ಮೊಯ್ಲಿ ನೇತೃತ್ವದ ಪ್ರಣಾಳಿಕೆ ಸಮಿತಿ ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ರೈತರು, ಕಾರ್ಮಿಕರು, ಉದ್ಯಮಿಗಳು, ಭಾಗಿದಾರರು ಸೇರಿದಂತೆ ಎಲ್ಲರ ಜತೆ ಸಮಾಲೋಚನೆ ನಡೆಸಿ ಸಲಹೆ-ಸೂಚನೆಗಳನ್ನು ಪಡೆದಿದ್ದಾರೆ.
ಕಳೆದ ಬಾರಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಈ ಬಾರಿ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ, ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸಲಾಗಿದ್ದು, ಅಂತಿಮ ಟಚ್ ನೀಡಲಾಗುತ್ತಿದ್ದು, ತಿಂಗಳಾಂತ್ಯದಲ್ಲಿ ಪ್ರಣಾಳಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.