ಬೆಂಗಳೂರು,ಏ.9- ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದಿರುವ ಹಿನ್ನೆಲೆಯಲ್ಲಿ ಕೆಲವು ಆಕಾಂಕ್ಷಿಗಳು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಶಾಸಕ ಸುರೇಶ್ ಸೇರಿದಂತೆ ಮತ್ತಿತರರು ಡಾಲರ್ಸ್ ಕಾಲೋನಿಯಲ್ಲಿರುವ ದವಳಗಿರಿ ನಿವಾಸಕ್ಕೆ ಆಗಮಿಸಿ ಬಿಎಸ್ವೈ ಅವರನ್ನು ಭೇಟಿ ಮಾಡಿದರು.
ಚಿಕ್ಕಮಗಳೂರು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೇರೆ ಬೇರೆ ಕ್ಷೇತ್ರಗಳ ಆಕಾಂಕ್ಷಿಗಳು ಕೂಡ ದುಗುಡದಿಂದಲೇ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಟಿಕೆಟ್ ಕುರಿತಂತೆ ಮಾಹಿತಿ ಪಡೆದರು.
ನಾವು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಮೊದಲ ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲದಿರುವುದು ಆತಂಕ ತಂದಿದೆ. ಕ್ಷೇತ್ರದಲ್ಲಿ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ನಮಗೆ ಸ್ಪಷ್ಟ ಭರವಸೆ ನೀಡಬೇಕೆಂದು ಮನವಿ ಮಾಡಿದರು.
ಎಲ್ಲರ ಮಾತನ್ನು ಸಹನೆಯಿಂದ ಆಲಿಸಿದ ಯಡಿಯೂರಪ್ಪ ಯಾರೊಬ್ಬರು ಆತುರದ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿಲ್ಲ. ಸಮೀಕ್ಷೆ ಆಧಾರದ ಮೇಲೆ 224 ಕ್ಷೇತ್ರಗಳಿಗೆ ಟಿಕೆಟ್ ನೀಡಲಾಗುವುದು. ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರು ಸೇರಿದಂತೆ ಕೆಲವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಹಾಗೆಂದ ಮಾತ್ರಕ್ಕೆ ಉಳಿದವರನ್ನು ಕಡೆಗಣಿಸಲಾಗಿದೆ ಎಂದು ತಿಳಿದುಕೊಳ್ಳಬಾರದು.
ಒಂದೊಂದು ಕ್ಷೇತ್ರಗಳಿಗೂ ಹಲವಾರು ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದರಿಂದ ಕೆಲವು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ವಿಳಂಬವಾಗಿದೆ. ನೀವು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಯಥಾ ರೀತಿ ಪ್ರಚಾರ ನಡೆಸಲು ಸಜ್ಜಾಗಬೇಕು. ಊಹಾಪೆÇೀಹಗಳಿಗೆ ಕಿವಿಗೊಡದೆ ಧೈರ್ಯವಾಗಿರಿ ಎಂದು ಬಿಎಸ್ವೈ ಬೆಂಬಲಿಗರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.
ತಮ್ಮ ನಾಯಕರಿಂದಲೇ ಸ್ಪಷ್ಟ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಬೆಂಬಲಿಗರು ನಿರಮ್ಮಳವಾಗಿ ತಮ್ಮ ತಮ್ಮ ಕ್ಷೇತ್ರಗಳಿಗೆ ಹಿಂತಿರುಗಿದರು.