ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಗೆ ತಟ್ಟಿದ ಬಂಡಾಯದ ಬಿಸಿ!

ಬೆಂಗಳೂರು: ಬಿಜೆಪಿ ತನ್ನ 72 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ, ಟಿಕೆಟ್ ಸಿಗದ ಆಕಾಂಕ್ಷಿಗಳು ಬಂಡಾಯದ ಬಾವುಟ  ಹಾರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ 72 ಅಭ್ಯರ್ಥಿಗಳ ಮೊದಲ ಪಟ್ಟಿಗೆ ನರೇಂದ್ರ ಮೋದಿ ನೇತೃತ್ವದ ಚುನಾವಣಾ ಸಮಿತಿ ಭಾನುವಾರ ರಾತ್ರಿ ಒಪ್ಪಿಗೆ ನೀಡಿತ್ತು.

ಮೊದಲ ಪಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.  ಮುಖಂಡರಾದ ಕೆ.ಎಸ್. ಈಶ್ವರಪ್ಪ ಮತ್ತು ಆರ್. ಅಶೋಕ್ ತಮ್ಮ ಕೆಲ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಇದರ ಬೆನ್ನಲ್ಲೇ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.

ಚಿಕ್ಕಪೇಟೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಬಿಎಂಪಿ ಮಾಜಿ ಪ್ರತಿಪಕ್ಷದ ನಾಯಕ, ಬಿಜೆಪಿ ವಕ್ತಾರ ಎನ್‌.ಆರ್‌. ರಮೇಶ್‌ ಬೆಂಬಲಿಗರು ಪಕ್ಷದ ವರಿಷ್ಠರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೆಯೇ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದ ಮಾಜಿ ಡಿಸಿಎಂ ಆರ್. ಅಶೋಕರು ರಮೇಶ್ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೊದಲ ಪಟ್ಟಿಯಲ್ಲಿ ಚಿಕ್ಕಪೇಟೆ ಕ್ಷೇತ್ರಕ್ಕೆ ಎನ್.ಆರ್. ರಮೇಶ್‌ ಬದಲು ಉದಯ್‌ ಗರುಡಾಚಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಬೇಸರಗೊಂಡ ರಮೇಶ್ ಬೆಂಬಲಿಗರು ತಡರಾತ್ರಿ ಜಯನಗರದಲ್ಲಿರುವ ಮಾಜಿ ಡಿಸಿಎಂ ಆರ್. ಅಶೋಕ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಆರ್. ಅಶೋಕ್ ಮತ್ತು ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತೆಯೇ ಬಸವನಗುಡಿ ಕ್ಷೇತ್ರದಲ್ಲಿ ರವಿ ಸುಬ್ರಹ್ಮಣ್ಯ ಅವರಿಗೆ ಮತ್ತೆ ಟಿಕೆಟ್ ಘೋಷಿಸಿರುವುದರಿಂದ ಎರಡು ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಟ್ಟೆ ಸತ್ಯನಾರಾಯಣ ಕೂಡ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಶಿಗ್ಗಾಂವಿಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೋಮಣ್ಣ ಬೇವಿನಮರದ ಅವರಿಗೆ ಟಿಕೆಟ್ ಕೈತಪ್ಪಿದೆ. ಕೆ.ಎಸ್. ಈಶ್ವರಪ್ಪ ಆಪ್ತರಾದ ಸೋಮಣ್ಣ ಅವರ ಬದಲಿಗೆ ಯಡಿಯೂರಪ್ಪ ಆಪ್ತರಾದ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಸಿಕ್ಕಿದೆ. ಧಾರವಾಡದಲ್ಲಿ ಸೀಮಾ ವಸೂತಿ, ಶಿವಮೊಗ್ಗದಲ್ಲಿ ರುದ್ರೇಗೌಡ ಟಿಕೆಟ್ ವಂಚಿತರಾಗಿದ್ದಾರೆ.

ಆದಾಗ್ಯೂ ಈಶ್ವರಪ್ಪಗೆ ಟಿಕೆಟ್​ ಕೊಟ್ಟಿದ್ದು ಖುಷಿಯಿದೆ, ಅವರನ್ನ ಗೆಲ್ಲಿಸೋದೇ ನಮ್ಮ ಕೆಲಸ. ನನ್ನ ಬೆಂಬಲಿಗರಲ್ಲಿ ಟಿಕೆಟ್​ ಸಿಕ್ಕಿಲ್ಲ ಎಂಬ ಅಸಮಾಧಾನವಿದೆ. ಅದನ್ನ ಸರಿಪಡಿಸುತ್ತೇವೆ ಎಂದುಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಹೇಳಿದ್ದಾರೆ.

ರುದ್ರೇಗೌಡ ಹೇಳಿಕೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಖುಷಿ ಹಂಚಿಕೊಂಡ ಈಶ್ವರಪ್ಪ, ಟಿಕೆಟ್​ಗಾಗಿ ನಾನು ಬ್ರಿಗೇಡ್​ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ  ಶಾಸಕ ತಿಪ್ಪೇಸ್ವಾಮಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದರು. ಆದರೆ, ರಾಜ್ಯ ನಾಯಕರಿಂದ ಬುಲಾವ್ ಹಿನ್ನೆಲೆ ಸಭೆಯನ್ನು ಶಾಸಕ ತಿಪ್ಪೇಸ್ವಾಮಿ ಮಾಡಿದ್ದಾರೆ. ದೂರವಾಣಿ ಕರೆ ಮಾಡಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಶ್ರೀರಾಮುಲು ಅವರು ತಿಪ್ಪೇಸ್ವಾಮಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಮಾತನಾಡಿರುವ ಶಾಸಕ ತಿಪ್ಪೇಸ್ವಾಮಿ, ಪಕ್ಷದ ಮುಖಂಡರಾದ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರ ಮೇಲೆ ನನಗೆ ವಿಶ್ವಾಸ ಇದೆ ಎಂದಿದ್ದಾರೆ.

ಇನ್ನು ರಾಜರಾಜೇಶ್ವರಿ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಮತ ಉದ್ಭವಿಸಿದೆ. ಮಾಜಿ ಕಾರ್ಪೊರೇಟರ್ ರಾಮಚಂದ್ರಪ್ಪ, ತುಳಸಿ ಮುನಿರಾಜು ಗೌಡ ಬಂಡಾಯದ ಬಾವುಟ ಹಾರಿಸಿದ್ದಾರೆ.

ಮುಖಂಡರ ಮನೆಗಳಿಗೆ ದುಂಬಾಲು:

ಇನ್ನು ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದವರು ತೀವ್ರ ಆತಂಕದಲ್ಲಿದ್ದು,

2ನೇ ಪಟ್ಟಿಯಲ್ಲಿ ಆದರೂ ನಮಗೂ ಟಿಕೆಟ್​ ಕೊಡಿಸಿ ಎಂದು

ಬೆಂಗಳೂರಿನ ಡಾಲರ್ಸ್ ಕಾಲೋನಿಯ ಬಿಎಸ್​ವೈ ನಿವಾಸದ ಮುಂದೆ ಟಿಕೆಟ್ ಆಕಾಂಕ್ಷಿಗಳಿಂದ ಪರೇಡ್ ನಡೆದಿದೆ.

ಕಟ್ಟಾ ಸುಬ್ರಮಣ್ಯ ನಾಯ್ಡು, ಜಿ.ಆರ್ ಪಾಟೀಲ್ ಸೇರಿ ಹಲವರ ಭೇಟಿ ನೀಡಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ಶಿವಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಮೊದಲ ಪಟ್ಟಿಯಲ್ಲಿ ಕೇವಲ ಯಲಹಂಕ ಕ್ಷೇತ್ರದ ಟಿಕೆಟ್ ಮಾತ್ರ ಘೋಷಣೆಯಾಗಿದ್ದು, ದೇವನಹಳ್ಳಿ, ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಆಗಿಲ್ಲ.

ದೊಡ್ಡಬಳ್ಳಾಪುರ ಕ್ಷೇತ್ರದಿಂದ ಟಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಂಸದ ಆರ್ ಎಲ್ ಜಾಲಪ್ಪ ಮಗ ನರಸಿಂಹಸ್ವಾಮಿ ಮುನಿಸಿಕೊಂಡಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಆಂತರಿಕ ಕಲಹ ಹಿನ್ನೆಲೆ ಬಿಜೆಪಿ ವರಷ್ಠರು ಟಿಕೆಟ್ ಘೋಷಿಸಲು ವಿಳಂಬ ಮಾಡುತ್ತಿದ್ದಾರೆ.

ಬಂಡಾಯ ಏನೆ ಇದ್ದರೂ ಅಳಿದು ತೂಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಜಾತಿ ಲೆಕ್ಕಾಚಾರ‌ವಾಗಿ ಲಿಂಗಾಯತರಿಗೆ ಮಣೆ ಹಾಕಲಾಗಿದೆ.

ಮೊದಲ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ 21 ಅಭ್ಯರ್ಥಿಗಳು.

ಪರಿಶಿಷ್ಟ ಜಾತಿಯ 10 ಅಭ್ಯರ್ಥಿಗಳು. ಒಕ್ಕಲಿಗ ಸಮುದಾಯದ 10 ಅಭ್ಯರ್ಥಿಗಳು. ಹಿಂದುಳಿದ ವರ್ಗದ 19 ಅಭ್ಯರ್ಥಿಗಳು. ಕೊಡವ ಸಮುದಾಯದ ಒಬ್ಬ ಅಭ್ಯರ್ಥಿ. ಬ್ರಾಹ್ಮಣ ಜಾತಿಯ 5 ಅಭ್ಯರ್ಥಿಗಳು. ಪರಿಶಿಷ್ಟ ಪಂಗಡದ 6 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ