ವೈದ್ಯನೆಂದು ಶಿಕ್ಷಕರನ್ನು ನಂಬಿಸಿ ಮೋಸ

ಬೆಂಗಳೂರು, ಏ.8- ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ತಾನೊಬ್ಬ ಶ್ರೀಮಂತ ಉದ್ಯಮಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ, ವೈದ್ಯನೆಂದು ಶಿಕ್ಷಕರನ್ನು ನಂಬಿಸಿ ಮೋಸ ಮಾಡುತ್ತಿದ್ದ ವಂಚಕನೊಬ್ಬನನ್ನು ಉತ್ತರ ವಿಭಾಗದ ಆರ್.ಟಿ.ನಗರ ಠಾಣೆ ಪೆÇಲೀಸರು ಬಂಧಿಸಿ 1.80 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಜಿ.ಹಳ್ಳಿಯ ಅಬ್ದುಲ್ ಖಾದರ್ ಅಲಿಯಾಸ್ ಸಲೀಂ, ಅಲಿಯಾಸ್ ಡಾ.ಸಲೀಂ (59) ಬಂಧಿತ ವಂಚಕ.

ಈತ ನಗರದಲ್ಲಿರುವ ವಿವಿಧ ಶಾಲೆಗಳಿಗೆ ಭೇಟಿ ನೀಡಿ ತಾನೊಬ್ಬ ಶ್ರೀಮಂತ ಉದ್ಯಮಿ ಎಂದು ಹೇಳಿಕೊಳ್ಳುತ್ತಿದ್ದನಲ್ಲದೆ ಈ ಶಾಲೆಯ ಹಳೆಯ ವಿದ್ಯಾರ್ಥಿ ನಾನು.ತನ್ನ ಬಳಿ ಸಾಕಷ್ಟು ಹಣವಿದೆ ಎಂದು ಶಾಲೆಯ ಶಿಕ್ಷಕಿಯರಿಗೆ ಸೀರೆಗಳನ್ನು ಕಾಣಿಕೆಯಾಗಿ ಕೊಡುತ್ತೇನೆ ಎಂದು ಹೇಳಿ ಅವರನ್ನು ನಂಬಿಸಿ ವಿಶ್ವಾಸ ಗಳಿಸುತ್ತಿದ್ದನು.

ಅಲ್ಲದೆ ಪ್ರಾಂಶುಪಾಲರು ಮತ್ತು ಶಿಕ್ಷಕಿಯರನ್ನು ಆಗಾಗ್ಗೆ ಭೇಟಿ ಮಾಡಿ ನಂಬಿಕೆ ಗಳಿಸಿ ತದನಂತರ ಅವರ ಬಳಿ ಇರುವ ಚಿನ್ನದ ಬಳೆಗಳು ಮತ್ತು ಸರಗಳನ್ನು ನೋಡಿ ಅದನ್ನು ಎಗರಿಸಲು ಸಂಚು ರೂಪಿಸಿದ್ದನು.

ಅದರಂತೆ ಪುನಃ ಶಾಲೆಗಳಿಗೆ ತೆರಳಿ ಮುಂದಿನ ವಾರ ನನ್ನ ಮಗಳ ಮದುವೆ ಇದೆ. ನೀವು ಧರಿಸಿರುವ ಆಭರಣಗಳ ಡಿಸೈನ್ ಚೆನ್ನಾಗಿ ಇದೆ. ನಿಮ್ಮ ಒಡವೆಗಳನ್ನು ಕೊಡಿ. ಅದೇ ರೀತಿ ಡಿಸೈನ್ ಒಡವೆ ಮಾಡಿಸಿಕೊಂಡು ವಾಪಸ್ ತಂದು ಕೊಡುತ್ತೇನೆ ಎಂದು ನಂಬಿಸಿ ಅವರ ಒಡವೆಗಳನ್ನು ಬಿಚ್ಚಿಸಿಕೊಂಡು ಮೋಸ ಮಾಡಿದ್ದನು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ತನಿಖೆ ನಡೆಸಿ ಕೊನೆಗೂ ಈ ವಂಚಕನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು , ಬಂಧಿತನಿಂದ 1.80 ಲಕ್ಷ ರೂ. ಬೆಲೆ ಬಾಳುವ 60 ಗ್ರಾಂ ತೂಕದ 4 ಚಿನ್ನದ ಬಳೆಗಳು , 1 ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಂಧನದಿಂದ ಎಚ್‍ಎಎಲ್ ಠಾಣೆ, ಶಿವಾಜಿನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೋಸದ ಪ್ರಕರಣಗಳು ಪತ್ತೆಯಾಗಿದೆ.
ಈ ವಂಚಕ ಈ ಹಿಂದೆಯೂ ಸಹ ಇದೇ ರೀತಿ ಬೆಂಗಳೂರು ನಗರ ಹಾಗೂ ಇತರೆ ಜಿಲ್ಲೆಗಳಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಸ್ಕ್ಯಾನಿಂಗ್ ಸೆಂಟರ್ ಬಳಿ ವೈದ್ಯನಂತೆ ನಟಿಸಿ ಸ್ಕ್ಯಾನಿಂಗ್‍ಗೆ ಹೋಗುವ ರೋಗಿಗಳಿಗೆ ನಂಬಿಸಿ ಅವರ ಒಡವೆಗಳನ್ನು ಬಿಚ್ಚಿಸಿಕೊಂಡು ಮೋಸ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಈ ಬಗ್ಗೆ ಬಳ್ಳಾರಿ, ವಿಜಯಪುರ, ಗುಲ್ಬರ್ಗಾ ಇತರೆ ಕಡೆಗಳಲ್ಲಿ ಮೋಸದ ಪ್ರಕರಣಗಳು ದಾಖಲಾಗಿವೆ.

ಕನ್ನಡ, ಇಂಗ್ಲಿಷ್, ಉರ್ದು, ತಮಿಳು ಭಾಷೆಯನ್ನು ಚೆನ್ನಾಗಿ ಮಾತನಾಡುವ ಈತ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಆಯಾ ಭಾಷಿಗರ ಜತೆ ಮಾತನಾಡುತ್ತಾ ಅವರನ್ನು ವಂಚಿಸುತ್ತಿದ್ದನು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ