ವಾರಣಾಸಿಯ ಪೂನಂಯಾದವ್ ಚಿನ್ನವನ್ನು ಗೆಲ್ಲುವ ಮೂಲಕ ಈ ವಿಭಾಗದಲ್ಲಿ 5ನೆ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್‍ನ 4ನೆ ದಿನವೂ ಭಾರತೀಯ ವೇಟ್‍ಲಿಫ್ಟರ್‍ಗಳ ಚಿನ್ನದ ಬೇಟೆ ಮುಂದುವರಿದಿದೆ. ಇಂದು ನಡೆದ 69 ಕೆಜಿ ಮಹಿಳೆಯರ ವೇಟ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಾರಣಾಸಿಯ ಪೂನಂಯಾದವ್ ಚಿನ್ನವನ್ನು ಗೆಲ್ಲುವ ಮೂಲಕ ಈ ವಿಭಾಗದಲ್ಲಿ 5ನೆ ಚಿನ್ನದ ಪದಕವನ್ನು ದೇಶಕ್ಕೆ ತಂದುಕೊಟ್ಟರು.
2014ನೆ ಗ್ಲಾಸ್‍ಗ್ಲ್ಯೋದಲ್ಲಿ ನಡೆದ ಕಾಮನ್‍ವೆಲ್ತ್‍ನ ತನ್ನ ಪಾದಾರ್ಪಣೆ ಪಂದ್ಯದಲ್ಲೇ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದ ಪೂನಂ ಇಂದು ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.
69 ಕೆಜಿ ಮಹಿಳೆಯರ ವಿಭಾಗದಲ್ಲಿ ಪೂನಂ ಎರಡು ವಿಭಾಗದಲ್ಲೂ ಕ್ರಮವಾಗಿ 100 ಮತ್ತು 122 ಕೆಜಿ ಭಾರ ಎತ್ತುವ ಮೂಲಕ ಒಟ್ಟು 222 ಕೆಜಿ ತೂಕವನ್ನು ತನ್ನ ಭುಜದ ಮೇಲೆ ಹೊತ್ತು ಸ್ವರ್ಣ ಪದಕಕ್ಕೆ ಭಾಜನರಾದರು. ಇಂಗ್ಲೆಂಡ್‍ನ ಸಾರಾ ಡೇವಿಸ್ ಒಟ್ಟು 217 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದರೆ, ಫಿಜಿಯ ಅಪೆÇಲೊನಿಯಾ (216ಕೆಜಿ) ಹೊತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಕಳೆದ ವರ್ಷ ನಡೆದ ಕಾಮನ್‍ವೆಲ್ತ್ ಚಾಂಪಿಯನ್‍ಷಿಪ್‍ನಲ್ಲಿ ಪೂನಂ 63 ಕೆಜಿ ವಿಭಾಗದಲ್ಲಿ ಪಾಲ್ಗೊಂಡು ಬೆಳ್ಳಿ ಪದಕವನ್ನು ದೇಶಕ್ಕೆ ಗೆದ್ದುಕೊಟ್ಟಿದ್ದರು.
ಇದುವರೆಗೂ ಭಾರತ ವೇಟ್‍ಲಿಫ್ಟಿಂಗ್‍ನಲ್ಲಿ 7 ಪದಕವನ್ನು ಜಯಿಸಿದ್ದು ಮಿರಾಬಿ ಚಾನು (48 ಕೆಜಿ), ಸಂಜಿತಾ ಚಾನು (53 ಕೆಜಿ), ಸತೀಶ್ ಶಿವಲಿಂಗಂ (77 ಕೆಜಿ), ವೆಂಕಟ್ ರಾಹುಲ್ ರಂಗಲ್ (85 ಕೆಜಿ) ಚಿನ್ನದ ಪದಕವನ್ನು ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ