ಮತದಾನದ ಬಗ್ಗೆ ಜಾಗೃತಿಗಾಗಿ ಗೆಜ್ಜೆ-ಹೆಜ್ಜೆ ಬೀದಿನಾಟಕ

ಬೆಂಗಳೂರು, ಏ.8- ಮತದಾನ ಅತ್ಯಂತ ಶ್ರೇಷ್ಟವಾದುದು. ಮತದಾನದ ಬಗ್ಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಕಬ್ಬನ್‍ಪಾರ್ಕ್‍ನಲ್ಲಿ ಇಂದು ಬೆಳಗ್ಗೆ ಬಿಬಿಎಂಪಿ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಖ್ಯಾತ ಕಲಾ ತಂಡದಿಂದ ಹಮ್ಮಿಕೊಂಡಿದ್ದ ಗೆಜ್ಜೆ-ಹೆಜ್ಜೆ ಬೀದಿನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲಿ ಎಂಬ ಕಾರಣಕ್ಕೆ ಬೀದಿ ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಗೆಜ್ಜೆ-ಹೆಜ್ಜೆ ಮತದಾನದ ಅರಿವಿನ ನಾಟಕವಾಗಿದ್ದು, ಕಲಾವಿದರಾದ ಮೈಸೂರು ರಮಾನಂದ್ ಮತ್ತು ತಂಡದವರು ಅದ್ಭುತವಾಗಿ ನಾಟಕ ಪ್ರದರ್ಶಿಸಿದ್ದಾರೆ. ಇದು ಮತದಾನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಜನರು ತಾವಾಗಿಯೇ ಸ್ವಯಂ ಜಾಗೃತರಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಇಂತಹ ಜಾಗೃತಿ ಕಾರ್ಯಕ್ರಮಗಳು ನಗರದ ಹಲವು ಕಡೆ ಹಮ್ಮಿಕೊಳ್ಳಲಾಗಿದೆ ಎಂದರು.
ತದನಂತರ ಹಡ್ಸನ್ ವೃತ್ತದ ಕಬ್ಬನ್‍ಪಾರ್ಕ್ ಮುಖ್ಯದ್ವಾರದಿಂದ ಬಿಬಿಎಂಪಿ ಕೇಂದ್ರ ಕಚೇರಿವರೆಗೆ ಮತದಾನದ ಅರಿವಿನ ಬಗೆಗೆ ಬರೆದ ಫ್ಲೆಕ್ಸ್‍ಗಳೊಂದಿಗೆ ಜಾಥಾ ನಡೆಸಲಾಯಿತು.
ಈ ವೇಳೆ ಚುನಾವಣಾ ವಿಶೇಷ ಆಯುಕ್ತ ಮನೋಜ್‍ಕುಮಾರ್ ಮೀನಾ, ಜಿಲ್ಲಾಧಿಕಾರಿ ಹಾಗೂ , ಅಪರ ಜಿಲ್ಲಾ ಚುನಾವಣಾಧಿಕಾರಿ ದಯಾನಂದ್, ವಿಶೇಷ ಆಯುಕ್ತರಾದ ರವೀಂದ್ರ ಮತ್ತಿತರರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ