ಸಮುದ್ರಮಾರ್ಗವಾಗಿ ಬಂದು ಉಗ್ರರು ದಾಳಿ ನಡೆಸುವ ಸಾಧ್ಯತೆ: ಗೋವಾ ಹಾಗೂ ಮುಂಬೈ ಕರಾವಳಿ ತೀರದಲ್ಲಿ ಹೈ ಅಲರ್ಟ್

ಪಣಜಿ:ಏ-7: ಪಾಕ್ ಉಗ್ರರು ಸಮುದ್ರ ಮಾರ್ಗ ಮೂಲಕ ಪ್ರವೇಶಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಗೋವಾ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಉಗ್ರರು ಗೋವಾ ಕರಾವಳಿ ತೀರಕ್ಕೆ ಮೀನುಗಾರಿಕೆ ಮಾಡುವ ಮತ್ತು ಪ್ರವಾಸಿಗರ ಸೋಗಿನಲ್ಲಿ ಆಗಮಿಸಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಗೋವಾ ಕರಾವಳಿ ತೀರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಗೋವಾ ಮಾತ್ರವಲ್ಲದೇ ಉಗ್ರರು ಮುಂಬೈ ಸಮುದ್ರ ಮಾರ್ಗದ ಮೂಲಕವೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಇತ್ತೀಚೆಗೆ ಗೋವಾ ಕರಾವಳಿ ತೀರದಲ್ಲಿ ಅನುಮಾನಸ್ಪದವಾಗಿ ಮೀನು ಹಿಡಿಯುತ್ತಿದ್ದ ಪ್ರವಾಸಿಗನೋರ್ವನನ್ನು ಅಧಿಕಾರಿಗಳು ಬಂಧಿಸಿದ್ದರು. ಈತನ ಬಳಿ ಪಾಕಿಸ್ತಾನಕ್ಕೆ ಸರಿದ ಕೆಲ ವಸ್ತುಗಳು ಪತ್ತೆಯಾಗಿದ್ದವು. ಹೀಗಾಗಿ ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿವೆ.

ಮೂಲಗಳ ಪ್ರಕಾರ ಮೀನುಗಾರಿಕೆ ಟ್ರಾಲರ್‌ ಮೂಲಕ ಭಯೋತ್ಪಾದಕರು ಗೋವೆಯ ಕಡಲ ಕಿನಾರೆಯತ್ತ ಬರುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಗೋವೆಯ ದೂರ ತೀರದಲ್ಲಿ ವ್ಯವಹರಿಸುತ್ತಿರುವ ನಾವೆಗಳು ಮತ್ತು ಕ್ಯಾಸಿನೋಗಳಿಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ ಎಂದು ರಾಜ್ಯದ ಬಂದರು ಸಚಿವರು ಹೇಳಿದ್ದಾರೆ.

ಪಶ್ಚಿಮ ಕರಾವಳಿಯನ್ನು ಗುರಿ ಇರಿಸಿಕೊಂಡು ಉಗ್ರರು ದಾಳಿ ಮಾಡಲಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ಕೋಸ್ಟ್‌ ಗಾರ್ಡ್‌ ಪಡೆಗಳು ಹಂಚಿಕೊಂಡ ಪ್ರಕಾರ ಗೋವೆಯ ದೂರ ತೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಸಿನೋಗಳು, ಜಲ ಕ್ರೀಡಾ ನಿರ್ವಾಹಕರು, ಬಾರ್ಜ್‌ಗಳು ಮುಂತಾಗಿ ಎಲ್ಲರಿಗೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಗಿದೆ ಎಂದು ರಾಜ್ಯದ ಬಂದರು ಸಚಿವ ಜಯೇಶ್‌ ಸಾಲ್‌ಗಾಂವ್‌ಕರ್‌ ತಿಳಿಸಿದ್ದಾರೆ.

Goa on alert,intel on terrorists using sea-route ,enter India

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ