ನವದೆಹಲಿ, ಏ.6- ಸಂಸತ್ ಕಲಾಪಗಳಿಗೆ ನಿರಂತರವಾಗಿ ಅಡ್ಡಿಯಾಗಿರುವುದಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರೇ ಕಾರಣ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ಕುಮಾರ್ ವಿರುದ್ಧ ಕಾಂಗ್ರೆಸ್ ಇಂದು ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಧುರೀಣ ಕೆ.ಸಿ.ವೇಣುಗೋಪಾಲ್ ಅವರು ಇಂದು ಅನಂತ್ಕುಮಾರ್ ವಿರುದ್ಧ ನೋಟಿಸ್ ಜಾರಿಗೊಳಿಸಲು ಲೋಕಸಭಾಧ್ಯಕ್ಷೆ ಸುಮಿತ್ರ ಮಹಾಜನ್ ಅವರಿಗೆ ಮನವಿ ಮಾಡಿದೆ. ಈ ಸಂಬಂಧ ಸ್ಪೀಕರ್ ಅವರಿಗೆ ಮನವಿ ಮಾಡಿರುವ ವೇಣುಗೋಪಾಲ್, ಸದನದ ಕಲಾಪಗಳನ್ನು ನಡೆಸಲು ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂಬ ಅಂಶವನ್ನು ತಿಳಿಸಿದ್ದಾರೆ. ಅನಂತ್ಕುಮಾರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಹಾಗೂ ಕಲಾಪಗಳಿಗೆ ವಿಘ್ನ ಉಂಟುಮಾಡಲು ಕಾಂಗ್ರೆಸ್ ಕಾರಣ ಎಂಬ ಬಗ್ಗೆ ದೇಶದ ಜನರಿಗೆ ತಪ್ಪು ಸಂದೇಶ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಜಾರಿಗೊಳಿಸುವಂತೆ ಸ್ಪೀಕರ್ ಅವರನ್ನು ಕೋರಿದ್ದಾರೆ.