ಬೆಂಗಳೂರು, ಏ.6- ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಗಳಿಂದಾಗಿ ಮತ್ತೆ ಮೂರು ದಿನ ಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ.
ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಏ.8ರಿಂದ 10ರವರೆಗೆ ಮೂರು ದಿನಗಳ ಕಾಲ ರಾಜ್ಯದಲ್ಲಿ ಚದುರಿದಂತೆ ಹಲವು ಕಡೆ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ರೆಡ್ಡಿ ತಿಳಿಸಿದರು.
ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಾಧಾರಣದಿಂದ ಕೆಲವೆಡೆ ಉತ್ತಮ ಮಳೆಯಾಗಿತ್ತು. ಮತ್ತೆ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದ್ದು, ಏಪ್ರಿಲ್ ತಿಂಗಳ ಎರಡನೇ ವಾರದಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ದಕ್ಷಿಣ ಹಾಗೂ ಉತ್ತರ ಒಳನಾಡು ಎರಡರಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ರೀತಿ ಮಳೆಯಾಗುವ ಸಾಧ್ಯತೆಗಳಿವೆ.
ತಮಿಳುನಾಡಿನ ಕರಾವಳಿ ಭಾಗದಲ್ಲಿ ಕಂಡು ಬಂದಿರುವ ಮೇಲ್ಮೈ ಸುಳಿಗಾಳಿ ಇನ್ನೆರಡು ದಿನಗಳಲ್ಲಿ ಯಾವ ರೀತಿಯ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದರು.