ಒಂದೇ ಕಡೆ ಇರುವ ಅಧಿಕಾರಿಗಳಿಗೆ ವರ್ಗಾವಣೆ ಸರ್ಕಾರ ಮಾಡಿರುವ ವರ್ಗಾವರ್ಗಿ ಪಟ್ಟಿ ಪರಿಶೀಲನೆ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್

ಬೆಂಗಳೂರು, ಏ.6- ಮೂರ್ನಾಲ್ಕು ವರ್ಷಗಳಿಂದ ಒಂದೇ ಕಡೆ ಇರುವ ಅಧಿಕಾರಿಗಳನ್ನು ಕಟ್ಟುನಿಟ್ಟಾಗಿ ವರ್ಗಾವಣೆ ಮಾಡಲಾಗುವುದು ಮತ್ತು ಚುನಾವಣೆ ಘೋಷಣೆಗೂ ಮುನ್ನ ಒಂದು ವಾರದೊಳಗೆ ಸರ್ಕಾರ ಮಾಡಿರುವ ವರ್ಗಾವರ್ಗಿ ಪಟ್ಟಿಯನ್ನು ಪರಿಶೀಲಿಸಲಾಗುವುದು ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಇಂದಿಲ್ಲಿ ಹೇಳಿದರು.

ಕಳೆದ ಮೂರು ದಿನಗಳಿಂದ ವಿಧಾನಸಭೆ ಚುನಾವಣೆ ಸಿದ್ಧತೆ ಭದ್ರತೆ ಬಗ್ಗೆ ಸರ್ಕಾರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ, ಪರಿಶೀಲನೆ ನಡೆಸಿದ ನಂತರ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ರಾಜಕೀಯ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಸೇರಿದಂತೆ ಹಲವರೊಂದಿಗೆ ಸಮಾಲೋಚನೆ ನಡೆಸಿ ಸಲಹೆ, ಸೂಚನೆಗಳನ್ನು ಪಡೆದಿದ್ದೇವೆ. ಸಾಧುವಾದ ಎಲ್ಲ ಸಲಹೆಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.

ಸರ್ಕಾರಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಯಾವುದೇ ಹಂತದಲ್ಲಿ ಪಕ್ಷಗಳ ಪರವಾಗಿ ಪ್ರಭಾವ ಬೀರುವ ನಡವಳಿಕೆ ಪ್ರದರ್ಶಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚುನಾವಣಾ ರ್ಯಾಲಿ, ವಾಹನಗಳ ಲೈಸೆನ್ಸ್, ಧ್ವನಿ ವರ್ಧಕಗಳ ಬಳಕೆಗೆ ಅನುಮತಿ ಪಡೆಯಲು ವಿಳಂಬವಾಗುತ್ತದೆ ಎಂದು ಪಕ್ಷಗಳು ದೂರು ನೀಡಿವೆ. ಅದಕ್ಕೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಚುನಾವಣಾ ಪ್ರಚಾರದಲ್ಲಿ ರ್ಯಾಲಿ ನಡೆಸುವುದು, ಇತರೆ ಪ್ರಚಾರ ಕಾರ್ಯದ ವೇಳೆ ನೀತಿ-ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದುವರೆಗೆ ಕ್ಷೇತ್ರವಾರು ಅನುದಾನ ಬಿಡುಗಡೆಗೆ ಕಡಿವಾಣ ಹಾಕಲಾಗಿದೆ. ಜಾತ್ರೆ ಹಾಗೂ ಇತರೆ ಧಾರ್ಮಿಕ ಕಾರ್ಯಗಳಿಗೆ ನಿರ್ಬಂಧ ವಿಧಿಸಲು ಮನವಿ ಮಾಡಲಾಗಿದೆ. ರಾಜಕೀಯ ಉದ್ದೇಶ ಹೊರತಾದ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯಸರ್ಕಾರ ದುಬಾರಿ ವೆಚ್ಚದ ಜಾಹೀರಾತು ನೀಡಿರುವುದು ಮತ್ತು ಈಗಲೂ ನೀಡುತ್ತಿರುವ ಬಗ್ಗೆ ಆಕ್ಷೇಪ ಬಂದಿತ್ತು ಎಂಬ ಬಗ್ಗೆ ಆಯೋಗ ಪರಿಶೀಲಿಸುತ್ತಿದೆ. ಕೆಲವು ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರು ವಾಹನಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ನೀತಿ-ಸಂಹಿತೆ ಉಲ್ಲಂಘನೆಯಾಗಿದ್ದಲ್ಲಿ ಕಠಿಣ ಕ್ರಮ ವಹಿಸುವ ಬಗ್ಗೆ ಎಚ್ಚರಿಕೆ ನೀಡಿದರು.
ಚುನಾವಣಾ ಪ್ರಚಾರದ ವೇಳೆ ಮತ್ತು ಸಭೆ-ಸಮಾರಂಭಗಳಲ್ಲಿ ಮಾಡುವ ಭೋಜನ ವ್ಯವಸ್ಥೆಗೆ ಅಡ್ಡಿ ಮಾಡಬಾರದು ಎಂದು ಮನವಿ ಬಂದಿದೆ. ನೀತಿ-ಸಂಹಿತೆ ವ್ಯಾಪ್ತಿಯಲ್ಲಿದ್ದರೆ ಅದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರು ಈಗಲೂ ಹುದ್ದೆಯಲ್ಲಿ ಮುಂದುವರಿದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಸಂವಿಧಾನೇತರ ವ್ಯಕ್ತಿಗಳು ಚುನಾವಣೆ ವ್ಯವಸ್ಥೆಯಿಂದ ದೂರ ಉಳಿದಿರಬೇಕು. ಕಾರ್ಯಾಂಗದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಒಂದು ವೇಳೆ ಅದು ಮುಂದುವರಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಹಣ ಹಂಚಿಕೆ ಮತ್ತು ದುರುಪಯೋಗದ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ಹಲವಾರು ತಂಡ ರಚಿಸಲಾಗಿದೆ. ಡಿಜಿಟಲ್ ಪೇಮೆಂಟ್ ಮತ್ತು ಆ್ಯಪ್ ಆಧಾರಿತ ಹಣ ಸಂದಾಯವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಆದರೂ ಆಯೋಗ ಪ್ರಯತ್ನ ನಿಲ್ಲಿಸಿಲ್ಲ. ಕಾಲಕಾಲಕ್ಕೆ ಎಲ್ಲೆಡೆ ನಿಗಾ ಇಡಲಾಗಿದೆ. ಸಾರ್ವಜನಿಕರು ಕೂಡ ಈ ನಿಟ್ಟಿನಲ್ಲಿ ಆಯೋಗಕ್ಕೆ ಸಹಕಾರ ನೀಡಬೇಕು ಎಂದರು.
ಶಾಂತಿಯುತ ಚುನಾವಣೆ ನಡೆಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅನುಮಾನಾಸ್ಪದ ವ್ಯಕ್ತಿ ಮತ್ತು ಪುನರಾವರ್ತಿತ ಅಪರಾಧಗಳ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.
115 ಕೇಂದ್ರ ಮೀಸಲು ಶಸ್ತ್ರಸಜ್ಜಿತ ಯೋಧರು: ಚುನಾವಣಾ ಬಂದೋಬಸ್ತ್‍ಗಾಗಿ 115 ಕೇಂದ್ರ ಮೀಸಲು ಶಸ್ತ್ರ ಸಜ್ಜಿತ ಯೋಧರನ್ನು ನಿಯೋಜಿಸಲಾಗುತ್ತಿದೆ. ಜತೆಗೆ ಎಲ್ಲ ಕಡೆಗೆ ಅಗತ್ಯ ಸಿಬ್ಬಂದಿಗಳನ್ನೂ ಒದಗಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 4.96 ಕೋಟಿ ಮತದಾರರಿದ್ದಾರೆ. ಅದರಲ್ಲಿ ಪುರುಷರು 2.51 ಕೋಟಿ, ಮಹಿಳೆಯರು 2.44 ಕೋಟಿ ಇದ್ದಾರೆ. ಯುವ ಮತದಾರರ ಸೇರ್ಪಡೆ ಗಣನೀಯವಾಗಿದೆ. ಸಾರ್ವಜನಿಕರು ಆಸಕ್ತಿಯಿಂದ ಬಂದು ಮತದಾನ ಮಾಡಬೇಕು. ಈ ಬಗ್ಗೆ ಆಯೋಗ ಹಲವಾರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಚುನಾವಣಾ ಕರ್ತವ್ಯದ ವೇಳೆ ನಿಯೋಜಿತ ಸಿಬ್ಬಂದಿಗಳ ಆರೋಗ್ಯ ಹದಗೆಟ್ಟರೆ ತಕ್ಷಣ ತುರ್ತು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ನಗದು ರಹಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಏರ್ ಆ್ಯಂಬುಲೆನ್ಸ್ ಸಹ ಸಿದ್ಧವಿರಿಸಲಾಗಿದೆ ಎಂದರು.
ಖರ್ಚು-ವೆಚ್ಚಗಳ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಮಿತಿಮೀರಿದ ಹಣ ಬಳಕೆ ಮೇಲೆ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಪ್ರತಿ ಕ್ಷೇತ್ರಕ್ಕೆ ಆರು ಮಂದಿಯಂತೆ 1344 ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, 1245 ಲೆಕ್ಕಾಚಾರ ನಿಗಾವಣಾ ತಂಡಗಳನ್ನು ರಚಿಸಲಾಗಿದೆ.
ಹಣ ದುರುಪಯೋಗ ಕಂಡುಬಂದರೆ ಆದಾಯ ತೆರಿಗೆ ಇಲಾಖೆ ಟೋಲ್‍ಫ್ರೀ ನಂ.1800-4252-115ಗೆ ಕರೆ ಮಾಡಬಹುದು ಎಂದು ಹೇಳಿದರು.

ರಾಜ್ಯದ ಐದು ವಿಮಾನ ನಿಲ್ದಾಣಗಳಲ್ಲಿ ಗುಪ್ತಚರ ತಂಡಗಳನ್ನು ನಿಯೋಜಿಸಲಾಗಿದೆ. ರೈಲ್ವೆ ನಿಲ್ದಾಣಗಳ ಮೇಲೂ ನಿಗಾ ಇಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ 200 ಮೊಬೈಲ್ ಸ್ಕ್ವಾಡ್‍ಗಳು ಕೆಲಸ ಮಾಡುತ್ತಿವೆ. ಈವರೆಗೆ 2,04,74,130 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ