ನವದೆಹಲಿ, ಏ.6-ಕಾವೇರಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸತತ 23 ದಿನಗಳಿಂದಲೂ ಪ್ರ್ರತಿಧ್ವನಿಸಿ ಯಾವುದೇ ವಿಷಯಗಳ ಚರ್ಚೆ ಇಲ್ಲದೇ ಅಂತ್ಯಗೊಂಡಿದೆ.
ಇಂದೂ ಕೂಡ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪವನ್ನು ಮೊಟಕುಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಮಾ.5ರಿಂದಲೂ ಎರಡೂ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯದೇ ಬಜೆಟ್ ಅಧಿವೇಶದ ಎರಡನೇ ಭಾಗ ಕಲಾಪರಹಿತವಾಗಿ ಕೊನೆಗೊಂಡಿತು. ಶೂನ್ಯ ಸಂಸತ್ತಿನ ಕಲಾಪ ಎಂಬ ಕಪ್ಪು ಚುಕ್ಕೆಯ ಕಳಂಕದೊಂದಿಗೆ ಯಾವುದೇ ಪ್ರಮುಖ ವಿಷಯಗಳು ಚರ್ಚೆಯಾಗದೇ ವೈಟ್ವಾಶ್ ಆಗಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಬಿಗಿಪಟ್ಟು ಮುಂದುವರಿಸಿರುವ ಎಐಎಡಿಎಂಕೆ ಸದಸ್ಯರು ಅಂತಿಮ ದಿನವಾದ ಇಂದೂ ಧರಣಿ ಮುಂದುವರಿಸಿದರು. ತೆಲುಗು ದೇಶಂ ಪಕ್ಷದ ಸದಸ್ಯರು ವಿಶೇಷ ಪ್ಯಾಕೇಜ್ಗೆ ಪಟ್ಟು ಹಿಡಿದರು.
ಪ್ರತಿಭಟನೆ ತೀವ್ರಗೊಂಡಿದ್ದರಿಂದ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಸುಮಿತ್ರ ಮಹಾಜನ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಮೇಲ್ಮನೆ ಕಲಾಪ ನಾಳೆಗೆ ಮುಂದೂಡಿಕೆ : ಮುಂದುವರೆದ ಬಜೆಟ್ ಅಧಿವೇಶನದ 23ನೇ ದಿನವೂ ಇದೇ ವಿಷಯಗಳು ಮೇಲ್ಮನೆ ಕಲಾಪ ಬಲಿಯಾಗಿದ್ದು, ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.