ಬೆಂಗಳೂರು ,ಏ.6-ದೇಹದ ಅತಿದೊಡ್ಡ ಅಂಗವಾದ ಚರ್ಮವನ್ನು ನಿರಂತರವಾಗಿ ಸಂರಕ್ಷಿಸುವುದರಿಂದ ರೋಗಗಳಿಂದ ದೂರ ಇರಬಹುದು ಎಂದು ಭಾರತೀಯ ಚರ್ಮ ರೋಗ ತಜ್ಞರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಚರ್ಮ ದಿನದ ಅಂಗವಾಗಿ ಜನರಲ್ಲಿ ಚರ್ಮ ರೋಗಗಳ ಕುರಿತಂತೆ ಜಾಗೃತಿ ಮೂಡಿಸಲು ಬೆಂಗಳೂರು ಚರ್ಮ ರೋಗ ತಜ್ಞರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚರ್ಮವನ್ನು ಯಾವ ರೀತಿಯಲ್ಲಿ ಸುರಕ್ಷಿತವಾಗಿ ಇಡಬೇಕು ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ನಾವು ಪ್ರತಿನಿತ್ಯ ಬಳಸುವ ವಿವಿಧ ರೀತಿಯ ಕ್ರೀಂಗಳಿಂದಾಗಿ ಚರ್ಮ ರೋಗಗಳು ಬರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಚರ್ಮರೋಗ ಬಂದವರು ತಜ್ಞರಿಂದ ಹಲವು ರೀತಿಯ ಸಲಹೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಕಜ್ಜಿ, ಇಸುಬು, ತೊನ್ನು ಇಂತಹ ರೋಗಗಳ ಬಗ್ಗೆ ಹಲವು ಕ್ಲಿನಿಕ್ಗಳಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಔಷಧಿ ಹಾಗೂ ಸಲಹೆಗಳನ್ನು ನೀಡಲಾಗುವುದು. ಇದಲ್ಲದೆ ಸಂಘದ ವತಿಯಿಂದ ಪ್ರತಿ ತಿಂಗಳು ಶಿಬಿರ ಏರ್ಪಡಿಸಿ ಸಾರ್ವಜನಿಕರಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಚರ್ಮ ರೋಗಗಳ ಬಗೆಗೆ ಮಾಹಿತಿ ಪಡೆಯಲು ಡಾ.ಜಗದೀಶ್ 9480493999 ಸಂಪರ್ಕಿಸುವಂತೆ ಕೋರಲಾಗಿದೆ.