ಕಳೆದ 23 ದಿನಗಳಿಂದ ಯಾವುದೇ ಕಲಾಪಕ್ಕೆ ಕಾಂಗ್ರೇಸ್ ಕಾರಣ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಏ.6-ಸಂಸತಿನಲ್ಲಿ ಕಳೆದ 23 ದಿನಗಳಿಂದ ಯಾವುದೇ ಕಲಾಪ ನಡೆಯದೇ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಕಾಂಗ್ರೇಸ್ ಕಾರಣ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದನ್ನು ಪ್ರತಿಭಟಿಸಿ ಏ.12ರಂದು ಬಿಜೆಪಿ ಸಂಸದರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ವಿರೋಧ ಪಕ್ಷಗಳ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ಬಲಗೊಳ್ಳುತ್ತಿರುವುದನ್ನು ಸಹಿಸದ ಪ್ರತಿಪಕ್ಷಗಳು ಕೀಳು ಮತ್ತು ನಕರಾತ್ಮಕ ರಾಜಕಾರಣದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.
ಸಂಸತ್ತಿನ ಉಭಯ ಕಲಾಪಗಳಿಗೆ ಅಡ್ಡಿ ಉಂಟು ಮಾಡಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಧೋರಣೆ ಖಂಡಿಸಿ ಇದೇ ತಿಂಗಳು 12ರಂದು ಬಿಜೆಪಿ ಸಂಸದರು ನಿರಶನ ನಡೆಸಲಿದ್ದಾರೆ. ಈ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅನಂತಕುಮಾರ್ ಹೇಳಿದರು.
ದಲಿತರ ಪ್ರತಿಭಟನೆಗಳನ್ನು ಗುರಿಯಾಗಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಬಿಜೆಪಿ ಸಂಸದರು ಮತ್ತು ಇತರ ನಾಯಕರು ಏ.14 ಮತ್ತು ಮೇ 5ರಂದು ರಾತ್ರಿ 20,844 ಗ್ರಾಮಗಳಲ್ಲಿ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಬಗ್ಗೆ ಮೋದಿ ಅವರು ಸಂಸತ್ ಸದಸ್ಯರಿಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ