ಬೆಂಗಳೂರು,ಏ.6-ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ದಿನದಿಂದ ದಿನಕ್ಕೆ ಕಗ್ಗಂಟಾಗಿ ಪರಿಣಮಿಸಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ತಮಗೆ ಟಿಕೆಟ್ ನೀಡಬೇಕೆಂದು ತಮ್ಮ ತಮ್ಮ ಗಾಡ್ ಫಾದರ್ಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ. ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಬೆದರಿಸುತ್ತಿರುವುದು ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.
ಯಾರಿಗೆ ಟಿಕೆಟ್ ನೀಡಬೇಕು, ಇನ್ಯಾರನ್ನು ಸಮಾಧಾನಪಡಿಸಬೇಕು ಎಂಬುದರ ಬಗ್ಗೆ ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು. ಮಾಜಿ ಸಚಿವರಾದ ಉಮೇಶ್ ಕತ್ತಿ, ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಮತ್ತಿತರ ಪ್ರಮುಖರು ಆಗಮಿಸಿ ಚರ್ಚೆ ನಡೆಸಿದರು.
ಮುಖ್ಯವಾಗಿ ಬಿಜೆಪಿ ನಾಯಕರಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ಗಾಂಧಿನಗರ, ಸಾಗರ, ಮಾಯಕೊಂಡ, ಹರಿಹರ, ಹರಪನಹಳ್ಳಿ, ಗುಲ್ಬರ್ಗ ದಕ್ಷಿಣ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಆಯ್ಕೆ ಕಗ್ಗಂಟಾಗಿದೆ.
ಬ್ಯಾಟರಾಯನಪುರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಆಪ್ತ ರಾಜ್ಗೋಪಾಲ್ಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಆರ್.ಅಶೋಕ್ ತಮ್ಮ ಸಹೋದರ ಸಂಬಂಧಿ ರವಿಗೆ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆ ಬ್ಯಾಟರಾಯನಪುರದಲ್ಲಿ ಬಿಜೆಪಿಗೆ ಮುನ್ನಡೆ ಕೊಡಿಸಿದರೆ ಟಿಕೆಟ್ ತಮಗೆ ಎಂದು ಸದಾನಂದಗೌಡ ರಾಜಗೋಪಾಲ್ಗೆ ಆಶ್ವಾಸನೆ ಕೊಟ್ಟಿದ್ದರು.
ಒಂದು ವೇಳೆ ಮಾತಿಗೆ ತಪ್ಪಿದರೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರಬಹುದೆಂಬ ಆತಂಕ ಡಿವಿಎಸ್ ಅವರನ್ನು ಕಾಡುತ್ತಿದೆ. ಈಗಾಗಲೇ ರವಿ ಎರಡು ಬಾರಿ ಸೋತಿರುವುದರಿಂದ ಈ ಬಾರಿ ರಾಜಗೋಪಾಲ್ಗೆ ಟಿಕೆಟ್ ನೀಡುವಂತೆ ದೆಹಲಿ ಮಟ್ಟದಲ್ಲೂ ಲಾಬಿ ಆರಂಭವಾಗಿದೆ.
ರಾಜಗೋಪಾಲ್ಗೆ ಟಿಕೆಟ್ ನೀಡಿದರೆ ಇಲ್ಲಿನ ಹಾಲಿ ಶಾಸಕ ಕೃಷ್ಣ ಭೆರೇಗೌಡ ಅವರಿಗೆ ಪ್ರಬಲ ಪೈಪೆÇೀಟಿ ನೀಡುತ್ತಾರೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸದಾನಂದ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು ರಾಜರಾಜೇಶ್ವರಿ ನಗರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬಿಜೆಪಿ ಆಕಾಂಕ್ಷಿಗಳಾಗಿ ತುಳಸಿ ಮುನಿರಾಜು ಗೌಡ, ಚಿತ್ರನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್, ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ತಮಗೆ ಟಿಕೆಟ್ ಬೇಕೆ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಗಾಂಧಿನಗರದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಶಿವಕುಮಾರ್, ಯುವ ಮೋರ್ಚಾ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿ ಗೌಡ ನಡುವೆ ಪೈಪೆÇೀಟಿ ಆರಂಭವಾಗಿದೆ.
ದೆಹಲಿಗೆ ಬೇಳೂರು:
ಇನ್ನು ರಾಜ್ಯದ ಗಮನ ಸೆಳೆದಿರುವ ಸಾಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಟಿಕೆಟ್ ಪಡೆಯಲೇಬೇಕೆಂದು ಪಟ್ಟು ಹಿಡಿದಿರುವ ಗೋಪಾಲಕೃಷ್ಣ ಬೇಳೂರು ತಮಗೆ ಟಿಕೆಟ್ ನೀಡುವಂತೆ ಲಾಬಿ ನಡೆಸಲು ದೆಹಲಿಗೆ ಹಾರಲು ಸಿದ್ದರಾಗಿದ್ದಾರೆ.
ಸಾಗರದಿಂದ ಮಾಜಿ ಸಚಿವ ಹಾಲಪ್ಪ ಅವರನ್ನೇ ಕಣಕ್ಕಿಳಿಸಲು ಯಡಿಯೂರಪ್ಪ ತೀರ್ಮಾನಿಸಿರುವುದರಿಂದ ಕೊನೆ ಕ್ಷಣದಲ್ಲಿ ತಮಗೆ ಟಿಕೆಟ್ ಕೈ ತಪ್ಪಬಹುದು ಎಂಬ ಭೀತಿಯಿಂದ ದೆಹಲಿಯಲ್ಲಿ ಲಾಬಿ ನಡೆಸಲಿದ್ದಾರೆ. ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿರುವುದು ಕಮಲ ನಾಯಕರಿಗೆ ದಿಕ್ಕೇ ತೋಚದಂತಾಗಿದೆ.