
ಬೆಂಗಳೂರು, ಏ.6- ಬೇಸಿಗೆ ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಕಲಬುರ್ಗಿ ಜಿಲ್ಲೆಗಳ ಸರ್ಕಾರಿ ಕಚೇರಿ ವೇಳೆಯನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಲಾಗಿದೆ.
ಬದಲಾದ ವೇಳಾಪಟ್ಟಿ ಏಪ್ರಿಲ್ ಮತ್ತು ಮೇ ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಈ ಜಿಲ್ಲೆಗಳ ಸರ್ಕಾರಿ ನೌಕರರು ಬದಲಾದ ವೇಳಾಪಟ್ಟಿಯಂತೆ ಕಚೇರಿಗೆ ಆಗಮಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕೆಂದು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇಂದು ಆದೇಶಿಸಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ ಮತ್ತು ನೌಕರರು ಚುನಾವಣಾಧಿಕಾರಿಗಳ ಆದೇಶದಂತೆ ಚುನಾವಣೆಯ ಕರ್ತವ್ಯಗಳನ್ನು ಚಾಚೂತಪ್ಪದಂತೆ ಪಾಲಿಸಬೇಕೆಂದು ಸೂಚಿಸಲಾಗಿದೆ.