ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶತಾಯ-ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ:

ಮೈಸೂರು, ಏ.6- ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶತಾಯ-ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಕಳೆದ ವಾರ ಒಕ್ಕಲಿಗ ಮತದಾರರು ಹೆಚ್ಚಾಗಿರುವ ಗ್ರಾಮಗಳಲ್ಲಿ ಸಿಎಂ ಪ್ರಚಾರ ನಡೆಸಿದ್ದರು. ಅದಾದ ನಂತರ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ದಾವಣಗೆರೆ, ಚಿತ್ರದುರ್ಗ, ಕೋಲಾರದಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದರಿಂದ ಅವರೊಂದಿಗೆ ಸಿಎಂ ತೆರಳಿದ್ದರು.
ಇಂದು ಮತ್ತೆ ಮತಬೇಟೆ ಪ್ರಾರಂಭಿಸಿರುವ ಸಿದ್ದರಾಮಯ್ಯ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತ ಉಮೇಶ್ ಅವರ ಮನೆಯಲ್ಲಿ ಉಪಹಾರ ಸೇವಿಸಿ ನಂತರ ಕೆಲವು ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಇದಲ್ಲದೆ ಚಾಮುಂಡೇಶ್ವರಿ ಕ್ಷೇತ್ರದ ಒಕ್ಕಲಿಗ ಮುಖಂಡರೊಂದಿಗೆ ಮಾತುಕತೆ ನಡೆಸಿ ತದನಂತರ ಹುಲ್ಲಾಳು, ಹೊಸಕೋಟೆ ಗ್ರಾಮಕ್ಕೆ ತೆರಳಿ ಮತ ಪ್ರಚಾರ ಮಾಡಿದರು.
ಕಳೆದ ವಾರ ಹಗಲು-ರಾತ್ರಿ ಎನ್ನದೆ ಮೂರು ದಿನಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಮತದಾರರನ್ನು ಮಾತನಾಡಿಸಿ ಈ ಬಾರಿ ತಮಗೆ ಆಶೀರ್ವದಿಸಬೇಕು. ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡುವೆ ಎಂದು ಸಿಎಂ ಹೇಳಿದ್ದಾರೆ.
ಒಟ್ಟಾರೆ ಇಂದು ಸಂಜೆವರೆಗೂ ಕ್ಷೇತ್ರದಲ್ಲಿ ಸಂಚರಿಸಿ ಸಿದ್ದರಾಮಯ್ಯ ಸಂಚಲನ ಮೂಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ