ಹೊಸದಿಲ್ಲಿ,ಏ.5
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವೇರುತ್ತಿರುವ ಬೆನ್ನಲ್ಲೇ ಓರ್ವ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ ಚುನಾವಣಾ ಆಯೋಗವು ದ್ವಿಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದಿದೆ.
ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಪ್ರಸ್ತಾವ ಹಲವು ವರ್ಷಗಳಿಂದ ಚರ್ಚೆಯಲ್ಲಿತ್ತು. ಕರ್ನಾಟಕದಲ್ಲಿ ಮೇ 12ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತ್ತೆ ಈ ವಿಚಾರ ಜೀವ ಪಡೆದುಕೊಂಡಿದೆ. ಆದರೆ ಕೋರ್ಟ್ ಅರ್ಜಿ ವಿಚಾರಣೆಯನ್ನು ಜುಲೈಯಲ್ಲಿ ನಡೆಸಲಿದ್ದು, ಕರ್ನಾಟಕ ವಿಧಾನಸಭೆಗೆ ಈ ಬೆಳವಣಿಗೆಯ ಬಿಸಿ ತಟ್ಟುವುದು ದೂರದ ಮಾತು.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿ ಸ್ಪರ್ಧಿಸುವುದರಿಂದ ಚುನಾವಣಾ ಆಯೋಗಕ್ಕೆ ಅನಗತ್ಯ ವೆಚ್ಚ ಉಂಟಾಗುತ್ತದೆ. ಎರಡೂ ಕ್ಷೇತ್ರಗಳಲ್ಲಿ ಗೆದ್ದಾಗ ಒಂದು ಕ್ಷೇತ್ರಕ್ಕೆ ಅಭ್ಯರ್ಥಿ ರಾಜೀನಾಮೆ ನೀಡ ಬೇಕಾಗುತ್ತದೆ. ಇದರಿಂದ ಮತದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಉಲ್ಲೇಖೀಸಿದೆ. ಒಂದೊಮ್ಮೆ, ಅವಕಾಶ ನೀಡಿದಲ್ಲಿ ಯಾವುದೇ ಒಂದು ಕ್ಷೇತ್ರದಲ್ಲಿ ರಾಜೀನಾಮೆ ನೀಡುವ ಅಭ್ಯರ್ಥಿಯೇ ಮರುಚುನಾವಣೆಯ ವೆಚ್ಚ ಭರಿಸಬೇಕು ಎಂದೂ ಹೇಳಿದೆ.