ನಗರದ ನಿವಾಸಿಗಳು ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ನಾಲ್ಕು ಹೊಸ ಮೊಬೈಲ್ ಆ್ಯಪ್‍ಗಳನ್ನು ಬಿಬಿಎಂಪಿ ಸಿದ್ದಪಡಿಸಿದೆ

ಬೆಂಗಳೂರು, ಏ.5-ನಗರದ ನಿವಾಸಿಗಳು ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ನಾಲ್ಕು ಹೊಸ ಮೊಬೈಲ್ ಆ್ಯಪ್‍ಗಳನ್ನು ಬಿಬಿಎಂಪಿ ಸಿದ್ದಪಡಿಸಿದೆ.
ಚುನಾವಣೆ ಇತಿಹಾಸದಲ್ಲೇ ನಗರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತದಾನ ಆಗುತ್ತಿಲ್ಲ. ಮತ ಕೇಂದ್ರ ಎಲ್ಲಿದೆ, ಎಲ್ಲಿಗೆ ಹುಡುಕಿಕೊಂಡು ಹೋಗಿ ಮತದಾನ ಮಾಡಬೇಕು. ಹೇಗೆ ಮತದಾನ ಮಾಡಬೇಕು ಎಂಬುದು ಕೆಲವರಿಗೆ ತಿಳಿದಿರುವುದೇ ಇಲ್ಲ. ಮತ್ತೆ ಕೆಲವರು ನಿರ್ಲಕ್ಷ್ಯ ತೋರುವುದರಿಂದ ಮತದಾನ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.

ಇದನ್ನೆಲ್ಲಾ ಮನಗಂಡು ಬಿಬಿಎಂಪಿ ನಾಲ್ಕು ಹೊಸ ಮೊಬೈಲ್ ಆ್ಯಪ್‍ಗಳನ್ನು ಬಿಡುಗಡೆ ಮಾಡುತ್ತಿದ್ದು, ಇವು ಮತದಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿವೆ. ನಾವು ಎಲ್ಲಿಗೆ ಹೋಗಿ ಮತದಾನ ಮಾಡಬೇಕು, ಹೇಗೆ ಹೋಗಬೇಕು ಎಂಬ ಮಾರ್ಗವನ್ನು ಕೂಡ ಇವು ಸೂಚಿಸಲಿವೆ.
ಈ ಆ್ಯಪ್‍ಗಳನ್ನು ಉಚಿತವಾಗಿ ಡೌನ್‍ಲೋಡ್ ಮಾಡಿಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಓಂಪ್ರಕಾಶ್ ರಾವತ್ ಅವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ.

ಮತದಾನ ಕೇಂದ್ರದ ನಾವಿಗೇಟರ್ ಆ್ಯಪ್:
ಮತ ಕೇಂದ್ರ ಯಾವುದು ಎಂದು ತಿಳಿಯದ ಮತದಾರರಿಗೆ ಈ ಅಪ್ಲಿಕೇಷನ್ ದಾರಿ ತೋರಲಿದೆ. ಈ ಆ್ಯಪ್ ಬಳಕೆ ಮಾಡುವ ಮತದಾರರು ತಮ್ಮ ವೋಟರ್ ಐಡಿ ಸಂಖ್ಯೆಯನ್ನು ನಮೂದಿಸಿದರೆ ಮತ ಕೇಂದ್ರ ಯಾವುದು, ತಾವು ಇರುವ ಸ್ಥಳದಿಂದ ಸುಲಭವಾಗಿ ಹೇಗೆ ಮತ ಕೇಂದ್ರವನ್ನು ತಲುಪಬಹುದು ಎಂದು ದಾರಿ ತೋರಿಸುತ್ತದೆ. ಮತ ಕೇಂದ್ರ ಸಿಗಲಿಲ್ಲ ಎಂಬ ಗೊಂದಲಕ್ಕೆ ಈ ಆ್ಯಪ್ ಮಹತ್ವದ್ದಾಗಿದೆ.

ಎಲೆಕ್ಷನ್ ಡೈರೆಕ್ಟರಿ ಆ್ಯಪ್:
ಈ ಅಪ್ಲಿಕೇಷನ್ ಚುನಾವಣೆಗೆ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳ ಸಂಪೂರ್ಣ ಮಾಹಿತಿ ನೀಡಲಿದೆ. ಯಾವ ವಿಧಾನಸಭಾ ಕ್ಷೇತ್ರಕ್ಕೆ ಯಾವ ಅಧಿಕಾರಿ ಇದ್ದಾರೆ. ಮತದಾರರು ಅವರನ್ನು ಹೇಗೆ ಸಂಪರ್ಕಿಸಬಹುದು ಎಂಬ ಬಗ್ಗೆ ತಿಳಿಯಬಹುದು. ಮತದಾರರು ಮೆಸೆಜ್ ಮಾಡಿದ ಕೂಡಲೇ ಅಧಿಕಾರಿಗಳು ಅವರಿಗೆ ಉತ್ತರ ನೀಡುವರು.
ನೀತಿ ಸಂಹಿತೆ ಆ್ಯಪ್:
ಈ ಅಪ್ಲಿಕೇಷನ್‍ನಲ್ಲಿ ನಗರದ ನಾಗರಿಕರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಎಲ್ಲೇ ನೀತಿ ಸಂಹಿತೆ ಉಲ್ಲಂಘನೆಯಾದರೆ ಅದರ ಬಗ್ಗೆ ದೂರು ನೀಡಬಹುದಾಗಿದೆ.
ಅಷ್ಟೇ ಅಲ್ಲ ಆಮಿಷ ಒಡ್ಡುವ ಕುರಿತು ಆಡಿಯೋ, ವಿಡಿಯೋ ತುಣುಕುಗಳಿದ್ದರೆ ಅವುಗಳನ್ನೂ ಸಹ ಈ ಆ್ಯಪ್ ಮೂಲಕ ಕಳುಹಿಸಬಹುದಾಗಿದೆ.
ಇಂತಹ ಚಿತ್ರಣವನ್ನು ಹಾಕಿದ ಕೂಡಲೇ ನಿಯಂತ್ರಣ ಕೊಠಡಿಗೆ ಇದರ ಸಂದೇಶ ಹೋಗುತ್ತದೆ. ತಕ್ಷಣ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.

ಚುನಾವಣಾ ರಸಪ್ರಶ್ನೆ ಆ್ಯಪ್:
ಈ ಅಪ್ಲಿಕೇಷನ್ ಮೂಲಕ 16 ವರ್ಷದಿಂದ 60 ವರ್ಷದ ವಯೋಮಾನದವರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.
ಚುನಾವಣೆಗೆ ಸಂಬಂಧಿಸಿದಂತೆ 10 ರಸಪ್ರಶ್ನೆಗಳು ಇರುತ್ತವೆ. ಇವುಗಳಿಗೆ ಉತ್ತರಿಸಬಹುದು. ಜತೆಗೆ ಚುನಾವಣೆ ಕುರಿತು ಮಾಹಿತಿಯನ್ನೂ ಪಡೆಯಬಹುದು. ಈ ಮಾಹಿತಿಯನ್ನು ಇನ್ನೊಬ್ಬರಿಗೂ ಹಂಚಿಕೊಳ್ಳಬಹುದಾಗಿದೆ.

ಬೆಂಗಳೂರಿನಂತಹ ಬ್ಯುಸಿ ನಗರದಲ್ಲಿ ಒತ್ತಡದ ಜೀವನದ ನಡುವೆಯೂ ಮತಗಟ್ಟೆಗೆ ಬಂದು ಸುಲಭವಾಗಿ ಮತದಾನ ಮಾಡಬಹುದು. ಅತಿ ಕಡಿಮೆ ಮತದಾನವಾಗುವ ನಗರ ಎಂಬ ಅಪಖ್ಯಾತಿಯಿಂದ ಹೊರ ಬರಲು ಈ ನಾಲ್ಕೂ ಆ್ಯಪ್‍ಗಳನ್ನು ಹೊರ ತರಲಾಗಿದೆ.
ಇವುಗಳನ್ನು ಬಳಕೆ ಮಾಡಿಕೊಂಡು ಮೇ 12ರಂದು ನಡೆಯಲಿರುವ ಚುನಾವಣೆ ದಿನ ಮತ ಕೇಂದ್ರಗಳಿಗೆ ಬಂದು ಮತದಾನ ಮಾಡಬೇಕೆಂದು ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ