ವಿಧಾನಸಭೆ ಚುನಾವಣೆಗೆ ಮೂರರಿಂದ ನಾಲ್ಕು ದಿನದೊಳಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು, ಏ.5-ವಿಧಾನಸಭೆ ಚುನಾವಣೆಗೆ ಮೂರರಿಂದ ನಾಲ್ಕು ದಿನದೊಳಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಉಸ್ತುವಾರಿ ಮುರಳೀಧರರಾವ್ ಹೇಳಿದರು.
ಮೊದಲ ಪಟ್ಟಿ ಬಿಡುಗಡೆಯಾದ ನಂತರ ನಾಲ್ಕೈದು ದಿನದಲ್ಲಿ ಎರಡನೇ ಪಟ್ಟಿ ಪ್ರಕಟಿಸಲಾಗುವುದು. 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಭಿಪ್ರಾಯ ಪಡೆಯಲಾಗಿದೆ. ಕೇಂದ್ರ ಚುನಾವಣಾ ಸಮಿತಿ ಈ ಬಗ್ಗೆ ಚರ್ಚಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು, ಜಿಲ್ಲಾಧ್ಯಕ್ಷರು, ಮಂಡಲದ ಪ್ರಮುಖರು ಸೇರಿದಂತೆ ವಿವಿಧ ಹಂತದಲ್ಲಿ ಅಭಿಪ್ರಾಯ ಪಡೆಯಲಾಗಿದೆ. ಯಾವುದೇ ರೀತಿಯ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದರು.
ಬೇರೆ ಪಕ್ಷಗಳಂತೆ ಬಿಜೆಪಿ ಕೂಡ ವಂಶಾಡಳಿತಕ್ಕೆ ಬೆಂಬಲ ನೀಡುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುರಳೀಧರರಾವ್, ಬಿಜೆಪಿ ಎಂದೂ ವಂಶಪಾರಂಪರ್ಯ ರಾಜಕಾರಣವನ್ನು ಬೆಂಬಲಿಸುವುದಿಲ್ಲ. ಅದನ್ನು ನಾವು ಯಾವಾಗಲೂ ವಿರೋಧಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪುತ್ರ ವಿಜೇಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆಯೆ ಎಂಬ ಮತ್ತೊಂದು ಪ್ರಶ್ನೆಗೆ ಅವರು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪ್ರಚಾರ ಮಾಡುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ. ಕೆಲವು ಕ್ಷೇತ್ರಗಳಲ್ಲಿ 20ರಿಂದ 25 ಆಕಾಂಕ್ಷಿಗಳಿದ್ದಾರೆ. ನಾವು ಯಾರೊಬ್ಬರಿಗೂ ಟಿಕೆಟ್ ನೀಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿಲ್ಲ ಎಂದರು.

ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಪ್ರಚಾರಕರ ಪಟ್ಟಿಯನ್ನು ಸಿದ್ದಪಡಿಸಲಾಗುವುದು. ಅಲ್ಲದೆ, ಚುನಾವಣಾ ಪ್ರಣಾಳಿಕೆಯನ್ನು ಯಾವಾಗ ಬಿಡುಗಡೆ ಮಾಡಬೇಕೆಂಬುದರ ಬಗ್ಗೆ ದಿನಾಂಕ ನಿಗದಿಪಡಿಸಿಲ್ಲ. ರಾಜ್ಯದ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಒಪ್ಪುವಂತಹ ಪ್ರಣಾಳಿಕೆಯನ್ನು ಸಮಿತಿ ರಚನೆ ಮಾಡಲಿದೆ ಎಂದು ತಿಳಿಸಿದರು.

ಈಗಾಗಲೇ ರೈತರು, ಉದ್ದಮಿಗಳು, ಕಾರ್ಮಿಕರು ಸೇರಿದಂತೆ ವಿವಿಧ ಹಂತದಲ್ಲಿ ಯಾವ ರೀತಿ ಪ್ರಣಾಳಿಕೆ ಇರಬೇಕು ಎಂಬುದರ ಬಗ್ಗೆ ಅಭಿಪ್ರಾಯ ಪಡೆಯಲಾಗಿದೆ. ಅಲ್ಲದೆ, ನಮ್ಮ ಪಕ್ಷದ ಪ್ರಮುಖರು, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ, ಶಾಲಾ-ಕಾಲೇಜುಗಳು ಸೇರಿದಂತೆ ವಿವಿಧ ಕಡೆ ಅಭಿಪ್ರಾಯ ಪಡೆದಿದ್ದಾರೆ. ಇವೆಲ್ಲವನ್ನೂ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡುವುದಾಗಿ ಮುರಳೀಧರರಾವ್ ಹೇಳಿದರು.

ಏ.6ರಂದು ಪಕ್ಷದ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ. ಅಂದು ರಾಜ್ಯದ ಎಲ್ಲಾ ಬೂತ್‍ಗಳಲ್ಲಿ ಬೂತ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ತಮ್ಮ ಮನೆಯ ಮುಂದೆ ಪಕ್ಷದ ಧ್ವಜ ಹಾರಿಸಲಿದ್ದಾರೆ.

ತಾಲ್ಲೂಕು ಮಟ್ಟದಲ್ಲಿ ಮಂಡಲ ಅಧ್ಯಕ್ಷರು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧ್ಯಕ್ಷರು ಕಡ್ಡಾಯವಾಗಿ ಧ್ವಜ ಹಾರಿಸಲೇಬೇಕು ಎಂದು ಸೂಚಿಸಿದರು.
ಯಡಿಯೂರಪ್ಪನವರ ಹುಟ್ಟುಹಬ್ಬದಂದು ನಾವು ಮುಷ್ಠಿಧಾನ್ಯಕ್ಕೆ ಚಾಲನೆ ನೀಡಿದ್ದೆವು. ಇದೇ 8,9 ಮತ್ತು 10ರಂದು ರಾಜ್ಯದ 600 ಸ್ಥಳಗಳಲ್ಲಿ ನಾವು ಮುಷ್ಠಿ ಧಾನ್ಯ ಸಂಗ್ರಹದ ಭೋಜನ ಸ್ವೀಕರಿಸಲಿದ್ದೇವೆ. ಇದರಲ್ಲಿ ಎಲ್ಲಾ ಪ್ರಮುಖರು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಸೂಚಿಸಿದರು.
ಅತಿ ಭ್ರಷ್ಟ ಸರ್ಕಾರ:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದ ಮುರಳೀಧರರಾವ್, ಈ ಬಾರಿಯ ಚುನಾವಣೆಯನ್ನು ಒಟ್ಟು ಮೂರು ವಿಷಯಗಳ ಮೇಲೆ ಎದುರಿಸಲಿದ್ದೇವೆ. ರಾಜಕೀಯವನ್ನು ಅಪರಾಧೀಕರಣಗೊಳಿಸಿದ್ದು, ಎರಡು ಭ್ರಷ್ಟಾಚಾರ ಹಾಗೂ ಕೋಮುವಾದದ ಹೆಚ್ಚಳ ನಮ್ಮ ಚುನಾವಣಾ ಅಸ್ತ್ರಗಳಾಗಿವೆ. ಅಲ್ಲದೆ, ಕರ್ನಾಟಕವನ್ನು ರೈತರ ಆತ್ಮಹತ್ಯೆಯಿಂದ ಮುಕ್ತಗೊಳಿಸುವುದು, ಕೃಷಿ ಬೆಳವಣಿಗೆಗೆ ಪೆÇ್ರೀ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದು. ಕಾಂಗ್ರೆಸ್ ಸರ್ಕಾರ ಸಮಾಜಘಾತಕ ಶಕ್ತಿಗಳ ವಿರುದ್ಧ ಕೈ ಜೋಡಿಸಿರುವುದನ್ನು ಜನತೆಗೆ ಮನವರಿಕೆ ಮಾಡಿಕೊಡುವುದಾಗಿ ಮುರಳೀಧರರಾವ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ