ಕಾಮನ್ ವೆಲ್ತ್ ಕ್ರೀಡಾಕೂಟ: ದಾಖಲೆ ನಿರ್ಮಿಸಿದ ಮೀರಾಭಾಯಿ ಚಾನು, ಭಾರತಕ್ಕೆ ಮೊದಲ ಚಿನ್ನದ ಪದಕ

ಗೋಲ್ಡ್ ಕೋಸ್ಟ್,ಏ.5

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಮೊದಲ ದಿನವೇ ಭಾರತದ ಪದಕ ಬೇಟೆ ಆರಂಭವಾಗಿದ್ದು, ಅತ್ತ ಪುರುಷರ ವೇಟ್ ಲಿಫ್ಟಿಂಗ್ ನಲ್ಲಿ ಕನ್ನಡಿಗ ಗುರುರಾಜ ಬೆಳ್ಳಿ ಪದಕ ಗೆದ್ದರೆ, ಇತ್ತ ಮಹಿಳೆಯರ ವಿಭಾಗದಲ್ಲಿ ಭಾರತದ ಮೀರಾಭಾಯಿ ಚಾನು ದೇಶಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಮಹಿಳೆಯರ 48 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಮೀರಾಬಾಯಿ ಚಾನು ಒಟ್ಟು 196 ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 23 ವರ್ಷದ ಮೀರಾಬಾಯಿ ಚಾನು ಅಂತಿಮ ಸ್ಪರ್ಧೆಯಲ್ಲಿ ಕ್ರಮವಾಗಿ 80 ಕೆಜಿ, 84 ಕೆಜಿ ಮತ್ತು 86 ಕೆಜಿ  ತೂಕ ಎತ್ತುವ ಮೂಲಕ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕ ಗೆದ್ದು, ದಾಖಲೆ ನಿರ್ಮಿಸಿದ್ದಾರೆ.

ಇದು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿದೆ.

ತಮ್ಮದೇ ದಾಖಲೆ ಮುರಿದ ಮೀರಾಬಾಯಿ

ಇನ್ನು ಈ ಪಂದ್ಯದಲ್ಲಿ ಮೀರಾಬಾಯಿ ಒಟ್ಟು 86 ಕೆಜಿ ತೂಕ ಎತ್ತುವ ಮೂಲಕ ಈ ಹಿಂದಿನ ತಮ್ಮದೇ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಬಾರಿ ಮೀರಾಬಾಯಿ ಚಾನು ಒಟ್ಟು 86 ಕೆಜಿ ತೂಕ ಎತ್ತಿದ್ದು. ಈ ಹಿಂದೆ 85 ಕೆಜಿ ತೂಕ ಎತ್ತಿದ್ದರು. ಕಳೆದ ವರ್ಷ ನಡೆದ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೀರಾಬಾಯಿ ಚಾನು 85 ತೂಕ ಎತ್ತಿದ್ದರು. ಅಲ್ಲದೆ ಈ ಹಿಂದೆ ನಡೆದ ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಾನು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಇನ್ನು ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ವೇಟ್ ಲಿಫ್ಟಿಂಗ್ ವಿಭಾಗದಿಂದ 12-12 ಪದಕಗಳನ್ನು ನಿರೀಕ್ಷೆ ಮಾಡಲಾಗುತ್ತಿದೆ. ಕಳೆದ ವರ್ಷ ನಡೆದ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇದೇ ಪ್ರದರ್ಶನ ಹಾಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೂ ಮುಂದುವರೆಯುವ ಸಾಧ್ಯತೆ ಇದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ