ಸಂದಿಗ್ಧ ಸ್ಥಿತಿಗೆ ಸಿಲುಕಿರುವ ವಿ.ಸೋಮಣ್ಣ

ಬೆಂಗಳೂರು,ಏ.4- ಹನೂರು ಇಲ್ಲವೇ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಷಯದಲ್ಲಿ ಹೊಯ್ದಾಟಕ್ಕೆ ಸಿಲುಕಿರುವ ಮಾಜಿ ಸಚಿವ ವಿ.ಸೋಮಣ್ಣ ಅತಂತ್ರಕ್ಕೆ ಸಿಲುಕಿದೆ.

ಅತ್ತ ಹನೂರು ಇಲ್ಲ. ಇತ್ತ ಗೋವಿಂದರಾಜನಗರವೂ ಇಲ್ಲ ಎಂಬಂತಹ ಸಂದಿಗ್ಧ ಸ್ಥಿತಿಗೆ ಸಿಲುಕಿರುವ ಸೋಮಣ್ಣನವರ ಮುಂದಿನ ರಾಜಕೀಯ ನಡೆ ಏನೆಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ತನಗೆ ಹನೂರಿನಿಂದ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಸೋಮಣ್ಣ ಪಕ್ಷದಲ್ಲಿ ಯಾರನ್ನು ನಂಬಿದ್ದರೋ ಅವರೇ ಇಂದು ಕೈ ಹಿಡಿಯುವ ಸ್ಥಿತಿಯಲ್ಲಿಲ್ಲ.

ಕಾಂಗ್ರೆಸ್‍ನಿಂದ ಬಿಜೆಪಿಗೆ ಸೋಮಣ್ಣ ಅವರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಎಸ್.ಯಡಿಯೂರಪ್ಪನವರ ಜೊತೆ ಅವರ ಬಾಂಧವ್ಯ ಹಳಸಿಕೊಂಡಿರುವುದೇ ಹನೂರಿನಿಂದ ಟಿಕೆಟ್ ಕೈತಪ್ಪಲು ಕಾರಣ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.
ಇನ್ನು ಸೋಮಣ್ಣ ಯಾವಾಗ ಬಿಎಸ್‍ವೈ ತಮ್ಮನ್ನು ದೂರವಿಟ್ಟರೋ ಬಳಿಕ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಹತ್ತಿರವಾದರೋ ಆಗಲೇ ಸೋಮಣ್ಣ ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾಗಿದ್ದರು.
ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆ ಮಾಡುವ ಸಂದರ್ಭದಲ್ಲೂ ಸೋಮಣ್ಣ ಬೇಡವೇ ಬೇಡ ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರು.ಅಂತಿಮವಾಗಿ ಅನಂತಕುಮಾರ್ ಮಧ್ಯಪ್ರವೇಶಿಸಿದ್ದರಿಂದ ಅವರ ಹಾದಿ ಸುಗಮವಾಗಿತ್ತು.

ಇದೀಗ ಹನೂರು ಹಾಗೂ ಗೋವಿಂದರಾಜನಗರ ಕ್ಷೇತ್ರಗಳು ಕೂಡ ಕೈತಪ್ಪುವ ಸಾಧ್ಯತೆ ಇದ್ದು , ಅರಸೀಕೆರೆಯಿಂದ ಪುತ್ರನ ಪರ ಪ್ರಚಾರ ನಡೆಸುವುದಕ್ಕಷ್ಟೇ ಅವರು ಸೀಮಿತವಾಗಬಹುದು.
ಮೂಲಗಳ ಪ್ರಕಾರ ಗೋವಿಂದರಾಜನಗರ ಟಿಕೆಟ್ ನೀಡಲು ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಅಲ್ಲಿ ಹಾಲಿ ಶಾಸಕ ಪ್ರಿಯ ಕೃಷ್ಣ ಅವರಿಗೆ ಸರಿಸಮಾನಾಗಿ ಪೈಪೆÇೀಟಿ ನೀಡುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ ಎನ್ನಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸೋಮಣ್ಣ ಅವರಿಗೆ ಟಿಕೆಟ್ ನೀಡಲೇಬೇಕೆಂದು ರಾಷ್ಟ್ರೀಯ ನಾಯಕರ ಮೇಲೆ ಯಡಿಯೂರಪ್ಪ ಆಗಲಿ ಇಲ್ಲವೇ ಅನಂತಕುಮಾರ್ ಒತ್ತಡಹಾಕುವ ಪರಿಸ್ಥಿತಿಯಲ್ಲಿಲ್ಲ.
ಮೂರು ದಿನಗಳ ಹಿಂದೆ ಯಡಿಯೂರಪ್ಪ ಮನೆಯಲ್ಲಿ ನಡೆದ ಸಂಧಾನದ ವೇಳೆ ಹನೂರಿನಿಂದ ಟಿಕೆಟ್ ನೀಡದಿದ್ದರೆ ತಾನು ಪಕ್ಷ ಬಿಡಲು ಸಿದ್ಧ ಎಂಬ ಸಂದೇಶವನ್ನು ಬಿಎಸ್‍ವೈಗೆ ರವಾನಿಸಿದರು.

ಇದಕ್ಕೆ ಯಡಿಯೂರಪ್ಪ ಕೂಡ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿಯೇ ಇದ್ದರು. ಅಂದರೆ ನೀವು ಪಕ್ಷ ಬಿಟ್ಟು ಹೋಗುವುದರಿಂದ ನಮಗೇನೂ ನಷ್ಟವಿಲ್ಲ ಎಂಬಂತಿತ್ತು ಬಿಎಸ್‍ವೈ ಅವರ ನಡುವಳಿಕೆ.
ಹೀಗೆ ಬಿಜೆಪಿಯಲ್ಲೂ ನೆಲೆಯೂರದೆ ಕಾಂಗ್ರೆಸ್‍ನಲ್ಲೂ ಉಳಿಯದೆ ಅತಂತ್ರವಾಗಿರುವ ಸೋಮಣ್ಣ ರಾಜಕೀಯ ಭವಿಷ್ಯ ಮುಂದೇನು ಎಂಬುದು ಅವರ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ