ದಲಿತ ನಾಯಕನಿಗೆ ನಮ್ಮ ಸರ್ಕಾರ ನೀಡಿದಷ್ಟು ಗೌರವ ಯಾವ ಸರ್ಕಾರ ನೀಡಿಲ್ಲ: ಪ್ರಧಾನಿ ಮೋದಿ

ನವದೆಹಲಿ:ಏ-4: ದಲಿತ ನಾಯಕನಿಗೆ ನಮ್ಮ ಸರ್ಕಾರ ನೀಡಿದಷ್ಟು ಗೌರವ ಈ ಹಿಂದಿನ ಯಾವ ಸರ್ಕಾರವೂ ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಂಸದರ ವಸತಿಗಾಗಿ ನಿರ್ಮಿಸಿದ ವೆಸ್ಟರ್ನ್ ಕೋರ್ಟ್ ಅನೆಕ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸ ಮತ್ತು ಅವಮಾನ ಪ್ರಕರಣಗಳ ಕುರಿತು ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಅಂಬೇಡ್ಕರ್ ಅವರ ಕನಸಿನ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ನಮ್ಮ ಸರ್ಕಾರ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದೆ. ದಲಿತ ನಾಯಕನಿಗೆ ನಮ್ಮ ಸರ್ಕಾರ ನೀಡಿದಷ್ಟು ಗೌರವ ಈ ಹಿಂದಿನ ಯಾವ ಸರ್ಕಾರವೂ ನೀಡಿಲ್ಲ ಎಂದರು.

ರಾಜಕೀಯ ಲಾಭಕ್ಕಾಗಿ ಪ್ರತಿಯೊಬ್ಬರು ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಂಡಿದ್ದಾರೆ. ನಾನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ತೋರಿಸಿದ ದಾರಿಯಲ್ಲೇ ನಡೆಯುತ್ತಿದ್ದೇನೆ. ಅಂಬೇಡ್ಕರ್ ಅವರ ಆದರ್ಶಗಳನ್ನು, ಪ್ರಮುಖವಾಗಿ ಸಾಮರಸ್ಯ ಮತ್ತು ಒಗ್ಗಟ್ಟನ್ನು ನಾವು ಪಾಲಿಸುತ್ತಿದ್ದೇವೆ. ಬಡವರು ಮತ್ತು ಅತ್ಯಂತ ಬಡವರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಅಂಬೇಡ್ಕರ್ ಅವರು ನಿಧನರಾದ ನಂಬರ್ 26, ಅಲಿಪುರ್ ರಸ್ತೆ ಹೌಸ್ ಅನ್ನು ಏಪ್ರಿಲ್ 13ರಂದು ದೇಶಕ್ಕೆ ಸಮರ್ಪಿಸುವ ಮೂಲಕ ಅವರ ಜನ್ಮದಿನ ಆಚರಿಸಲಾಗುವುದು ಎಂದು ಪ್ರಧಾನಿ ಇದೇ ವೇಳೆ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ