ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಅಸಾಧ್ಯ: ಸುಪ್ರೀಂ ಕೋರ್ಟ್‌

ನವದೆಹಲಿ:ಏ-4: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಮತ್ತು ರಾಜ್ಯಕ್ಕೆ ಕಾನೂನುಗಳನ್ನು ರಚಿಸುವ ಕೇಂದ್ರದ ಅಧಿಕಾರವನ್ನು ಸೀಮಿತಗೊಳಿಸುವ ಸಂವಿಧಾನದ 370ನೇ ವಿಧಿ ದೀರ್ಘಕಾಲದ ಅಸ್ತಿತ್ವದಿಂದಾಗಿ ಕಾಯಂ ಆಗಿಬಿಟ್ಟಿದ್ದು ಅದನ್ನು ರದ್ದುಪಡಿಸುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಂವಿಧಾನ ವಿಧಿ 370 ತಾತ್ಕಾಲಿಕವೆಂದು ಘೋಷಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಕಳೆದ ವರ್ಷ ಏಪ್ರಿಲ್ 11ರಂದು ದೆಹಲಿ ಹೈಕೋರ್ಟ್ ವಜಾಗೊಳಿಸಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ವಿಜಯಲಕ್ಷ್ಮಿ ಝಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ್‌ ಕೆ. ಗೋಯಲ್‌ ಮತ್ತು ಆರ್‌. ಎಫ್‌ ನಾರಿಮನ್‌ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

370ನೇ ವಿಧಿ ತಾತ್ಕಾಲಿಕವಾಗಿದ್ದು, 1957ರ ಜನವರಿ 26ರಂದು ಜಮ್ಮು ಮತ್ತು ಕಾಶ್ಮೀರದ ಶಾಸನಸಭೆಯ ವಿಸರ್ಜನೆಯೊಂದಿಗೆ ಈ ವಿಧಿ ಅಸ್ತಿತ್ವ ಕಳೆದುಕೊಂಡಿದೆ ಎಂದು ಘೋಷಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಅಸಿಂಧು, ನಿಷ್ಕ್ರಿಯ ಹಾಗೂ ದೇಶದ ಸಂವಿಧಾನಕ್ಕೆ ಅಪಚಾರ ಎಂದು ಘೋಷಿಸುವಂತೆಯೂ ಅರ್ಜಿದಾರರು ಕೋರಿದ್ದರು.

ಸರ್ಫೆಸಿ ಕೇಸಿನಲ್ಲಿ ಕಳೆದ ವರ್ಷ ನೀಡಿದ್ದ ತೀರ್ಪಿನಲ್ಲಿ ಸಂವಿಧಾನ ವಿಧಿ 370 ತಾತ್ಕಾಲಿಕ ನಿಬಂಧನೆಯಲ್ಲ ಎಂದು ಹೇಳಲಾಗಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

2017ರ ಸರ್ಫೆಸಿ ಕೇಸಿಗೆ ಸಂಬಂಧಪಟ್ಟಂತೆ ನೀಡಿರುವ ತೀರ್ಪಿನ ವಿಷಯ ಇದಾಗಿದ್ದು ಸಂವಿಧಾನ ವಿಧಿ 370ರ ಮೇಲ್ಟಿಪ್ಪಣಿಯ ಹೊರತಾಗಿಯೂ ಇದು ತಾತ್ಕಾಲಿಕ ನಿಬಂಧನೆಯಲ್ಲ ಎಂದು ನ್ಯಾಯಮೂರ್ತಿಗಳಾದ ಎಕೆ ಗೊಯೆಲ್ ಮತ್ತು ಆರ್ ಎಫ್ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಕೆಲವು ಸಮಯಗಳ ನಂತರ ಈ ಕೇಸನ್ನು ವಿಚಾರಣೆ ನಡೆಸಲಾಗುವುದು ಏಕೆಂದರೆ ಇಂತಹ ಕೇಸುಗಳು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಾಕಿಯಿದ್ದು ಇವುಗಳನ್ನು ಶೀಘ್ರದಲ್ಲಿ ಪಟ್ಟಿ ಮಾಡಿ ವಿಚಾರಣೆ ನಡೆಸಲಾಗುವುದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ತಿಳಿಸಿದ್ದಾರೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಒತ್ತಾಯದ ಮೇರೆಗೆ ಕೇಸಿನ ವಿಚಾರಣೆಯನ್ನು ನ್ಯಾಯಪೀಠ ಮೂರು ವಾರಗಳವರೆಗೆ ಮುಂದೂಡಿದೆ.

Jammu And Kashmir Special Status, Article 370, Not Temporary

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ