ವಿಧಾನಸಭೆ ಚುನಾವಣೆ ಪೂರ್ವಸಿದ್ಧತೆ ಬಗ್ಗೆ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ನೇತೃತ್ವದ ತಂಡದ ಪರಿಶೀಲನೆ

 

ಬೆಂಗಳೂರು, ಏ.4-ರಾಜ್ಯ ವಿಧಾನಸಭೆ ಚುನಾವಣೆ ಪೂರ್ವಸಿದ್ಧತೆ ಬಗ್ಗೆ ಪರಿಶೀಲಿಸಲು ಬೆಂಗಳೂರಿಗೆ ಆಗಮಿಸಿರುವ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ನೇತೃತ್ವದ ತಂಡ ರಾಜ್ಯದ ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.

ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್, ಚುನಾವಣಾ ಆಯುಕ್ತರಾದ ಸುನಿಲ್ ಅರೋರಾ, ಅಶೋಕ್ ಲವಾಸ ಅವರನ್ನೊಳಗೊಂಡ ತಂಡ ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಸೇರಿದಂತೆ ಚುನಾವಣಾಧಿಕಾರಿಗಳಿಂದ ವಿಧಾನಸಭೆ ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲೇ ನೆಲೆಸುವ ಆಯುಕ್ತರ ತಂಡ ಚುನಾವಣಾ ಪೂರ್ವ ಸಿದ್ದತೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಸಲಹೆ ಸೂಚನೆಗಳನ್ನು ನೀಡಲಿದೆ.

ನಾಳೆ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಸೇರಿದಂತೆ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಚುನಾವಣೆ ಸಿದ್ದತೆ ಬಗ್ಗೆ ಪರಿಶೀಲನೆ ನಡೆಸುವ ಜೊತೆಗೆ ರಾಜ್ಯದಲ್ಲಿ ತುರ್ತು ಅಥವಾ ಅವಶ್ಯಕವಾಗಿ ಕೈಗೊಳ್ಳಬೇಕಾಗಿರುವ ಕಾರ್ಯಗಳು ಹಾಗು ಸೇವೆಗಳ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಡಿಯುವ ನೀರು, ಆರೋಗ್ಯ ಸೇವೆ ಮೊದಲಾದ ಆದ್ಯತಾ ಸೇವೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ನಡೆದಿರುವ ಪೂರ್ವಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಮತದಾರರ ಪಟ್ಟಿಗೆ ಮತದಾರರ ಹೆಸರು ಸೇರ್ಪಡೆ, ನೀತಿ ಸಂಹಿತೆ ಪಾಲನೆ, ಕಾನೂನು ಸುವ್ಯವಸ್ಥೆ, ಚುನಾವಣಾ ಭದ್ರತೆ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ಗುರುತಿಸುವಿಕೆ, ಸಾರ್ವಜನಿಕ ಹಾಗೂ ರಾಜಕೀಯ ಪಕ್ಷಗಳಿಂದ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ಚುನಾವಣಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚುನಾವಣಾ ತಂಡ ಚರ್ಚೆ ನಡೆಸಲಿದೆ.

ಇಂದು ಸಂಜೆ ವಿಕಾಸಸೌಧದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಿದೆ. ಸಂಜೆ 4.30ಕ್ಕೆ ಬಿಎಸ್‍ಪಿ, 4.50ಕ್ಕೆ ಬಿಜೆಪಿ, 5.10ಕ್ಕೆ ಕಮ್ಯುನಿಷ್ಟ್ ಪಾರ್ಟಿ, 5.30ಕ್ಕೆ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್‍ಸಿಸ್ಟ್), 5.50ಕ್ಕೆ ಕಾಂಗ್ರೆಸ್, 6.10ಕ್ಕೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, 6.30ಕ್ಕೆ ಜನತಾದಳ (ಜಾತ್ಯತೀತಾ) ಪಕ್ಷಗಳೊಂದಿಗೆ ಸಭೆ ನಡೆಸಲಿದ್ದು, ಚುನಾವಣಾ ಪೂರ್ವ ಸಿದ್ಧತೆಯ ಸಮಗ್ರ ಪರಿಶೀಲನೆ ನಡೆಸಿ ದೆಹಲಿಗೆ ಮರಳಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಾಳೆ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಅಧಿಕಾರಿಗಳೊಂದಿಗೆ ರಾವತ್ ಸಭೆ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ