ಏ.8ರಂದು ಮಾಲೀಕಯ್ಯ ಗುತ್ತೇದಾರ್, ನಾಲ್ಕು ಜನ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರ್ಪಡೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಏ.4- ಇದೇ 8ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮಾಲೀಕಯ್ಯ ಗುತ್ತೇದಾರ್, ನಾಲ್ಕು ಜನ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿಂದು ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರನ್ನು ಪಕ್ಷಕ್ಕೆ ಧ್ವಜ ನೀಡಿ ಬರಮಾಡಿಕೊಂಡ ನಂತರ ಮಾತನಾಡಿದ ಅವರು, ವಿಜಯಪುರ, ಬಸವ ಕಲ್ಯಾಣದಲ್ಲಿ ಇದೇ 8ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರೊಂದಿಗೆ ನಾಲ್ಕು ಜನ ಶಾಸಕರು ಸೇರಿದಂತೆ ಜೆಡಿಎಸ್‍ನ ಹಲವರು ಅಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಪಕ್ಷಕ್ಕೆ ಇಂದು ಒಳ್ಳೆಯ ದಿನ. ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಸಚಿವರಾದ ಬಸವರಾಜ ಪಾಟೀಲ್ ಯತ್ನಾಳ್, ನಾಗಪ್ಪ ಸಾಲೋಣಿ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಹಾಗೂ ಮಲ್ಲಿಕಾರ್ಜುನ ಕೂಬಾ ಅವರನ್ನು ಸ್ವಾಗತಿಸುವುದಾಗಿ ಹೇಳಿದರು.
ಚಿಂತನೆ ಒಪ್ಪಿ ಬಂದಿದ್ದೇನೆ: ನಮಗೆ ಟಿಕೆಟ್ ಸಿಗದೆ ಹೋದರೆ ಬಿಜೆಪಿಯಲ್ಲಿ ಇರುತ್ತೇನೆ. ಪ್ರಧಾನಿ ನರೇಂದ್ರಮೋದಿ ಅವರ ಚಿಂತನೆ ಒಪ್ಪಿ ಪಕ್ಷಕ್ಕೆ ಬಂದಿದ್ದೇನೆ. ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಮಲ್ಲಿಕಾರ್ಜುನ ಕೂಬಾ ತಿಳಿಸಿದರು.

ತಮಗೆ ಆಗದ ಕೆಲವರು ಈ ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಗೆ ಟಿಕೆಟ್ ಸಿಗದೆ ಹೋದರೂ ಬಿಜೆಪಿಯಲ್ಲಿ ಇರುತ್ತೇವೆ. ನಾಯಕರು ಹೇಳಿದಂತೆ ಕೆಲಸ ಮಾಡುತ್ತೇವೆ ಎಂದು ನುಡಿದರು.

ಅರಸಿಕೆರೆಯಿಂದ ಟಿಕೆಟ್‍ಗೆ ಆಗ್ರಹ: ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಯಡಿಯೂರಪ್ಪ ಅವರು ಕಾರು ಹತ್ತಲು ಬಂದಾಗ ಮಾಜಿ ಸಚಿವ ವಿ.ಸೋಮಣ್ಣ ಅವರ ಬೆಂಬಲಿಗರು ಕಾರಿಗೆ ಮುತ್ತಿಗೆ ಹಾಕಿ ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸೋಮಣ್ಣ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.
ಅರಸೀಕೆರೆಯಿಂದ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಲೇಬೇಕು. ಅವರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಒತ್ತಾಯಿಸಿದರು. ಯಡಿಯೂರಪ್ಪ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸಿದೆ ಸಿಟ್ಟಿನಿಂದಲೇ ಕಾರಿನಲ್ಲಿ ತೆರಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ