ಲಷ್ಕರ್-ಇ-ತೈಬಾ(ಎಲ್‍ಇಟಿ) ಉಗ್ರಗಾಮಿ ಹಫೀಜ್ ಸಯೀದ್ ನೇತೃತ್ವದ ಮಿಲ್ಲ ಮುಸ್ಲಿಂ ಲೀಗ್ (ಎಂಎಂಎಲ್) ರಾಜಕೀಯ ಪಕ್ಷವನ್ನು ಅಮೆರಿಕ ಸರ್ಕಾರ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ:

ನ್ಯೂಯಾರ್ಕ್, ಏ.3-ಮುಂಬೈ ದಾಳಿಯ ಸೂತ್ರಧಾರ ಹಾಗೂ ಲಷ್ಕರ್-ಇ-ತೈಬಾ(ಎಲ್‍ಇಟಿ) ಉಗ್ರಗಾಮಿ ಹಫೀಜ್ ಸಯೀದ್ ನೇತೃತ್ವದ ಮಿಲ್ಲ ಮುಸ್ಲಿಂ ಲೀಗ್ (ಎಂಎಂಎಲ್) ರಾಜಕೀಯ ಪಕ್ಷವನ್ನು ಅಮೆರಿಕ ಸರ್ಕಾರ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ. ಈ ಬೆಳವಣಿಗೆಯಿಂದ ಹಫೀಜ್ ಮತ್ತವನ ಸಂಘಟನೆಗೆ ದೊಡ್ಡ ಮಟ್ಟದ ಹೊಡೆತ ಬಿದ್ದಂತಾಗಿದೆ.
ಎಂಎಂಎಲ್‍ನ ಕೆಲವು ನಾಯಕರೂ ಅಲ್ಲದೇ ಎಲ್‍ಇಟಿಯ ಮತ್ತೊಂದು ಬಣ ತಹ್ರೀಲ್ ಇ ಅಜಾದಿ ಇ ಕಾಶ್ಮೀರ್(ಟಿಎಜಿಕೆ) ಸಹ ಭಯೋತ್ಪಾದಕ ಸಂಘಟನೆಗೆ ಸೇರಿಸಲಾಗಿದೆ ಎಂದು ಅಮೆರಿಕ ಸರ್ಕಾರ ತಿಳಿಸಿದೆ.  ಎಂಎಂಎಲ್ ಉಪಾಧ್ಯಕ್ಷ ಮುಜಮ್ಮಿಲ್ ಇಕ್ಬಾಲ್ ಹಾಶಿಮಿ, ಜಂಟಿ ಕಾರ್ಯದರ್ಶಿ ಮಹಮದ್ ಹ್ಯಾರಿಸ್ ದರ್, ಮಾಹಿತಿ ಕಾರ್ಯದರ್ಶಿ ತಬೀಶ್ ಖಯ್ಯುಂ, ಹಣಕಾಸು ಕಾರ್ಯದರ್ಶಿ ಮಹಮದ್ ಎಶಾನ್ ಹಾಗೂ ಫೈಸಲ್ ನದೀಮ್ ಹೆಸರುಗಳೂ ಸಹ ಭಯೋತ್ಪಾದಕರ ಪಟ್ಟಿಯಲ್ಲಿದೆ ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಎಲ್‍ಇಟಿ ಕುಕೃತ್ಯಗಳನ್ನು ಪಟ್ಟಿ ಮಾಡಿರುವ ಅಮೆರಿಕ ಈ ನಿಷೇಧಿತ ಉಗ್ರಗಾಮಿ ಸಂಘಟನೆ ಪಾಕಿಸ್ತಾನದಲ್ಲಿ ಮುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಸಾರ್ವಜನಿಕವಾಗಿ ರ್ಯಾಲಿಗಳನ್ನು ಆಯೋಜಿಸುತ್ತಿದೆ. ಭಯೋತ್ಪಾದಕ ಚಟುವಟಿಕೆಗಾಗಿ ನಿಧಿ ಸಂಗ್ರಹಿಸುತ್ತಿದೆ. ದಾಳಿಗಳನ್ನು ನಡೆಸುತ್ತಿರುವುದಲ್ಲದೇ ಆಕ್ರಮಣ ನಡೆಸುವ ಉಗ್ರರಿಗೆ ತರಬೇತಿ ನೀಡುತ್ತಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ