ಕುಣಿಗಲ್, ಏ.3- ಭಾರೀ ಬಿರುಗಾಳಿ ಮಳೆಯಿಂದಾಗಿ ತಾಲೂಕಿನಾದ್ಯಂತ ಅಡಿಕೆ, ತೆಂಗಿನ ಮರ ಉರುಳಿ ಬಿದ್ದು ಎರಡು ಕರುಗಳು ಜಖಂಗೊಂಡಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ 6 ಗಂಟೆ ಸಮಯದಲ್ಲಿ ಭಾರೀ ಬಿರುಗಾಳಿ ಸಮೇತ ಒಂದು ಗಂಟೆಗೂ ಹೆಚ್ಚು ಕಾಲ ಗಾಳಿ-ಮಳೆ ಬಿದ್ದಿದ್ದು, ಈ ಪರಿಣಾಮ ಜನಜೀವನ ಅಸ್ತವ್ಯಸ್ತದ ಜತೆಗೆ ಬೇಗೂರು ಸಮೀಪ ರಸ್ತೆ ಬದಿಯ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದು, ಪಟ್ಟಣದ ಖಾಸಗಿ ಆಸ್ಪತ್ರೆಯೊಂದಕ್ಕೆ ರೋಗಿಯನ್ನು ಕರೆದುಕೊಂಡು ಬಂದಿದ್ದ ಮಾರುತಿ ವ್ಯಾನ್ ಮೇಲೆ ಮರವೊಂದು ಬಿದ್ದಿದ್ದು, ಕಾರು ಜಖಂಗೊಂಡಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.
ಕುದುರೆ ಫಾರಂನ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಮದ್ದೂರು ರಸ್ತೆಯಲ್ಲಿ ಕೆಶಿಫ್‍ನವರು ರಸ್ತೆ ಕಾಮಗಾರಿ ನಡೆಸುತ್ತಿದ್ದು, ಮಳೆಯಿಂದ ಚರಂಡಿಗಳು ಬ್ಲಾಕ್ ಆದ ಪರಿಣಾಮ ಜಾಕೀಲ್ ಮತ್ತು ಜುಬೇರ್ ಎಂಬುವರ ಮನೆಗೆ ನೀರು ನುಗ್ಗಿ ರಾತ್ರಿ ಮಳೆಯಲ್ಲಿಯೇ ಕಾಲ ಕಳೆಯುವಂತಾಯಿತು. ಹೇರೂರು ಸಮೀಪ ತೆಂಗಿನ ಅಡಿಕೆ ಮರಗಳು ನೆಲಕ್ಕುರುಳಿದ್ದು, ರೈತರ ಬೆಳೆ ನಾಶಗೊಂಡಿವೆ.