ಹಾಸನ, ಏ.3-ರಾಜ್ಯದ ಜನರೇ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡುತ್ತೇವೆ ಎಂದು ಹೇಳುತ್ತಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯದ ಅಭಿವೃದಿಗೆ ಕಾಂಗ್ರೆಸ್ ಪಕ್ಷ ಸಾಕಷ್ಟು ಅಡ್ಡಗಾಲು ಹಾಕಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಹಣೆಬರಹವನ್ನು ನಿರ್ಧರಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಲು ಅವರೇನು ಜ್ಯೋತಿಷ್ಯ ಕಲಿತಿದ್ದಾರಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಆ ಕ್ಷೇತ್ರದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ ಎಂದು ಸವಾಲು ಹಾಕಿದರು. ಮಾಜಿ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಬಿಜೆಪಿಯಿಂದ ಹಾಗೂ ಹಾಲಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದು, ಇವರಿಬ್ಬರು ಈ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕೆಣಕಿದಷ್ಟು ಜೆಡಿಎಸ್ ಬಲಗೊಳ್ಳಲಿದೆ. ಜೆಡಿಎಸ್ನಲ್ಲಿ ಕುಟುಂಬ ರಾಜಕಾರಣವಿದೆ ಎಂದು ಹೇಳುತ್ತಾರೆ. ಕಾಂಗ್ರೆಸ್, ಬಿಜೆಪಿ ಈಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ನಮ್ಮ ಕುಟುಂಬದಿಂದ ಇಬ್ಬರೂ ಮಾತ್ರ ಸ್ಪರ್ಧಿಸಲಿರುವುದರಿಂದ ಕುಟುಂಬ ರಾಜಕಾರಣದ ಬಗ್ಗೆ ಯಾವುದೇ ರೀತಿ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದರು.
ನಿನ್ನೆ ಹಾಸನದಲ್ಲಿ ನಡೆದ ಪಕ್ಷದ ಸಮಾವೇಶ ಜೀವಮಾನದಲ್ಲೇ ಮರೆಯಲಾಗದಂತಹದ್ದು. ಮಳೆಯ ನಡುವೆಯೂ ಕಾರ್ಯಕರ್ತರ ಹಾಗೂ ಜನರು ಉತ್ಸಾಹ ತೋರಿದ್ದಾರೆ. ಮನೆ ಮಗ ಬರುತ್ತಿದ್ದಾನೆ ಎಂಬ ಭಾವನೆ ಜನರಲ್ಲಿ ಕಂಡಿದ್ದೇನೆ. ಮಳೆಯಿಂದ ಕಾರ್ಯಕ್ರಮದಲ್ಲಿ ಯಾರಿಗಾದರೂ ತೊಂದರೆಯಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದರು.
ಎರಡೂ ರಾಷ್ಟ್ರೀಯ ಪಕ್ಷಗಳ ಸಮಾವೇಶಕ್ಕಿಂತ ಜೆಡಿಎಸ್ ಸಮಾವೇಶಕ್ಕೆ ಜನರು ಬರುತ್ತಿದ್ದಾರೆ. ಜಗಳೂರು, ನಾಗಮಂಗಲದಲ್ಲೂ ಸಮಾವೇಶಕ್ಕೆ ಜನರು ಬಂದಿದ್ದರು ಎಂದು ಹೇಳಿದರು. ಯಾವ ಚಾಣಕ್ಯರ ತಂತ್ರವೂ ಇಲ್ಲಿ ನಡೆಯುವುದಿಲ್ಲ. ಆರೂವರೆ ಕೋಟಿ ಕನ್ನಡಿಗರು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಹಾಗಾಗಿ ಅತಂತ್ರ ಸರ್ಕಾರ ಬರುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷವೇ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೀರಪ್ಪ ಮೊಯ್ಲಿ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಕೇವಲ 39 ಸ್ಥಾನ ಪಡೆದಿತ್ತು ಎಂಬುದನ್ನು ಮರೆಯಬಾರದು. ಅದೇ ಪರಿಸ್ಥಿತಿ ಮರುಕಳಿಸಲಿದೆ ಎಂದು ಲೇವಡಿ ಮಾಡಿದರು.
ಚಾಮುಂಡೇಶ್ವರಿಕ್ಷೇತ್ರದಲ್ಲಿ ಕಳೆದ ಐದು ದಿನಗಳಿಂದ ಮುಖ್ಯಮಂತ್ರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಸ್ಥಾನ ಭದ್ರ ಪಡಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದ ಅವರು, ರೈತರ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಲಿಲ್ಲ. ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 280 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ತವರಿನಲ್ಲೇ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಲ ಮನ್ನಾ ಯೋಜನೆ ಹಳ್ಳ ಹಿಡಿದಿದೆ, ಸಹಕಾರಿ ಸಂಘಕ್ಕೆ 1500 ಕೋಟಿ ರೂ. ಮಾತ್ರ ಸಾಲ ಜಮಾ ಆಗಿದೆ. 6200 ಕೋಟಿ ರೂ. ಇನ್ನೂ ಬಾಕಿ ಇದೆ. ಹಾಗಾಗಿ ಈ ಯೋಜನೆ ಸಫಲವಾಗಿಲ್ಲ ಎಂದು ಹೇಳಿದರು.
ಕಳೆದ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಗೌಡರ ರಾಜಕೀಯವನ್ನು ಬಲಿ ತೆಗೆದುಕೊಂಡೆ ಎಂಬ ಆಪಾದನೆ ನನ್ನ ಮೇಲಿದೆ. ಈ ಬಾರಿ ರಾಜ್ಯದಲ್ಲಿ 113 ಸ್ಥಾನಗಳನ್ನು ಪಡೆದು ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ದೇವೇಗೌಡರಿಗೆ ತೃಪ್ತಿ ನೀಡಲಿದ್ದೇನೆ. ಅಲ್ಲದೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಪಕ್ಷದಿಂದ 25 ಸ್ಥಾನವನ್ನು ಎಚ್.ಡಿ.ದೇವೇಗೌಡರ ಮಡಿಲಿಗಿಟ್ಟು ಲೋಕಸಭೆಯಲ್ಲಿ ರೈತ ಪರ ದನಿ ಎತ್ತಲು ಮುಂದಾಗಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.