ದಿಡ್ಡಳ್ಳಿ ಹೋರಾಟವನ್ನು ನಕ್ಸಲ್ ಪ್ರೇರಿತ ಹೋರಾಟ ಎಂದು ಚಾರ್ಜ್‍ಶೀಟ್ ಬಿಡುಗಡೆಗೆ ಖಂದನೆ

ಬೆಂಗಳೂರು, ಏ.3- ದಿಡ್ಡಳ್ಳಿ ಹೋರಾಟವನ್ನು ಕೇಂದ್ರ ಸರ್ಕಾರ ನಕ್ಸಲ್ ಪ್ರೇರಿತ ಹೋರಾಟ ಎಂದು ಚಾರ್ಜ್‍ಶೀಟ್ ಬಿಡುಗಡೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ನಟ ಚೇತನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರ ಡಿಸೆಂಬರ್‍ನಲ್ಲಿ 3000 ಆದಿವಾಸಿಗಳ ಪರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆವು. ನಾವು ಸಂವಿಧಾನದ ಚೌಕಟ್ಟಿನಲ್ಲೇ ಶಸ್ತ್ರಾಸ್ತ್ರ ರಹಿತವಾಗಿ ಮಾಡಿದ್ದೆವು. ಹೋರಾಟ ಮಾಡುವಾಗ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ನಾವು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದಾಗ ಕೇಂದ್ರ ಸರ್ಕಾರ ನಮ್ಮ ಪರವಾಗಿ ನಿಲ್ಲಬೇಕಿತ್ತು. ಆದರೆ, ಇಂತಹ ಚಾರ್ಜ್‍ಶೀಟ್ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿ ನಮ್ಮ ತೇಜೋವಧೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ತರಹದ ಮಾನೋಭಾವವುಳ್ಳ ಸರ್ಕಾರವನ್ನು ಆಯ್ಕೆ ಮಾಡಬೇಕೆ. ಬೇಡವೆ ಎಂಬುದು ನಮ್ಮ ಕೈನಲ್ಲೇ ಇದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶೋಷಿತರ ಪರವಾಗಿಲ್ಲ. ಬದಲಾಗಿ ಶ್ರೀಮಂತರ, ಬಂಡವಾಳಗಾರರ, ಮೇಲ್ಜಾತಿಯವರ ಪರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾವು ಸೈದ್ದಾಂತಿಕವಾಗಿ ಬಿಜೆಪಿ ಸರ್ಕಾರದ ಸಿದ್ದಾಂತವನ್ನು ಒಪ್ಪುವುದಿಲ್ಲ. ಜಾತ್ಯಾತೀತ ವೈವಿದ್ಯತೆಯ ಪರವಾಗಿ ನಾವು ಹೋರಾಟ ಮಾಡುತ್ತೇವೆ. ನಮ್ಮ ಪರವಾಗಿ ಯಾವ ಪಕ್ಷವೂ ಇಲ್ಲ ಎಂದರು.
ಕಾಂಗ್ರೆಸ್‍ನ ಸಚಿವ ಎಂ.ಆರ್.ಸೀತಾರಂ ಸಹ ದಿಡ್ಡಳ್ಳಿ ಹೋರಾಟವನ್ನು ನಕ್ಸಲ್ ಹೋರಾಟ ಎಂದು ಬಿಂಬಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ನಮ್ಮ ಪರವಾಗಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕ್ಷಮೆಯಾಚಿಸಬೇಕು, ಚಾರ್ಜ್‍ಶೀಟ್ ಬಿಡುಗಡೆ ಮಾಡಿರುವುದನ್ನು ಹಿಂದೆ ಪಡೆಯಬೇಕು.

ಇಲ್ಲದಿದ್ದರೆ ನ್ಯಾಯಲಯದ ಮೂಲಕವೇ ನಾವು ನ್ಯಾಯ ಪಡೆಯುತ್ತೇವೆ. ಜತೆಗೆ ನಮ್ಮ ಮೇಲೆ ಹಾಕಿರುವ ಸುಳ್ಳು ಚಾರ್ಜ್‍ಶೀಟ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್‍ನವರು ಜತೆಗೂಡಿ ಶೋಷಿತರು, ಆದಿವಾಸಿಗಳನ್ನು ನಾಶಪಡಿಸಲು ರಾಜಕೀಯ ಕುತಂತ್ರ ನಡೆಸಿದ್ದಾರೆ ಎಂದು ನಟ ಚೇತನ್ ದೂರಿದರು.
ದಿಡ್ಡಳ್ಳಿಯ ಹೋರಾಟಗಾರರಾದ ಮಲ್ಲಪ್ಪ, ಲಕ್ಷ್ಮೀ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ