ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಬಿಜೆಪಿಗೂ ಬೇಡವಾದರೆ…?

ಬೆಂಗಳೂರು, ಏ.3- ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ಹಿರಿಯ ಮುತ್ಸದ್ದಿ ಕೇಂದ್ರದ ಮಾಜಿ ಸಚಿವ ಸೋಮನಹಳ್ಳಿ ಮಲ್ಲಯ್ಯ ಅಲಿಯಾಸ್ ಎಸ್.ಎಂ.ಕೃಷ್ಣ ಎಲ್ಲೂ ಕಾಣದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಾಜ್ಯ ವಿಧಾನಸಭೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಮನೆಯಲ್ಲಿ ಕುಳಿತಿದ್ದ ಹಿರಿಯ ರಾಜಕಾರಣಿಗಳು ತಮ್ಮ ತಮ್ಮ ಪಕ್ಷದ ಪರ ಬಿರುಸಿನ ಪ್ರಚಾರ ನಡೆಸಲು ಅಣಿಯಾಗುತ್ತಿದ್ದಾರೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ನೇತಾರರು ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಮತ ಬೇಟೆಗೆ ಸಜ್ಜಾಗಿದ್ದಾರೆ. ಆದರೆ, ಸೌಮ್ಯ ಸ್ವಭಾವದ, ಮೆಲುಮಾತಿನ ಎದುರಾಳಿಗಳನ್ನು ತೀಕ್ಷ್ಣವಾಗಿಯೇ ಟೀಕೆ ಮಾಡುವ ಎಸ್.ಎಂ.ಕೃಷ್ಣ ಬಿಜೆಪಿಯಲ್ಲಿ ಕಾಣಿಸದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.
ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಒಂದು ವಾರವಾದರೂ ಕೃಷ್ಣಾ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ ಎಂಬುದು ಖಾತರಿಯಾಗಿಲ್ಲ.

ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳದಿರುವುದು ಒಂದು ಕಾಲದಲ್ಲಿ ದೇಶದಲ್ಲೇ ನಂ.1 ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಹೊತ್ತಿದ್ದ ಹಿರಿಯ ಮುತ್ಸದ್ದಿ, ಬಿಜೆಪಿಗೂ ಬೇಡವಾದರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಂಡ್ಯದಲ್ಲಿ ನಡೆದ ಪರಿರ್ವತನೆ ಯಾತ್ರೆಯಲ್ಲಿ ಪಕ್ಷದ ಪ್ರಮುಖರ ಜತೆ ವೇದಿಕೆ ಹಂಚಿಕೊಂಡಿದ್ದ ಅವರು, ಬಳಿಕ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಕಡೆ ಪಕ್ಷ ಸದಾಶಿವನಗರದಲ್ಲಿರುವ ಅವರ ಮನೆಗೆ ಬಿಜೆಪಿಯ ಯಾವುದೇ ಮುಖಂಡರು ಹೋಗಿ ಪ್ರಚಾರಕ್ಕೆ ಬನ್ನಿ ಎಂದು ಆಹ್ವಾನವನ್ನೂ ನೀಡಿಲ್ಲ.

ನಾನು ಯಾವುದೇ ಆಸೆ, ಆಕಾಂಕ್ಷೆ ಇಟ್ಟುಕೊಂಡು ಬಿಜೆಪಿ ಸೇರಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಪ್ರಾರಂಭದಲ್ಲಿ ಹೇಳಿದ್ದರು.
ವಯೋ ಸಹಜ ಎಂಬಂತೆ ಬಿಜೆಪಿಯಲ್ಲಿ 75ರ ಗಡಿ ದಾಟಿದವರಿಗೆ ಯಾವುದೇ ರೀತಿಯ ಸ್ಥಾನಮಾನ ನೀಡುತ್ತಿಲ್ಲ. ಅದರಲ್ಲೂ ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೋಡಿ ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮ ಹಿಡಿತ ಸಾಧಿಸಿದ ಮೇಲೆ ಮೂಲೆ ಗುಂಪು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಸಾಲಿಗೆ ಎಸ್‍ಎಂಕೆ ಕೂಡ ಸೇರಿದ್ದಾರೆ ಎನ್ನಲಾಗಿದೆ.

ಹಿರಿಯರಾದ ಎಸ್.ಎಂ.ಕೃಷ್ಣ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲು ಬಿಜೆಪಿ ಮುಂದಾಗಿಲ್ಲ. ಕಡೆಪಕ್ಷ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಪಕ್ಷದ ಯಾವುದೇ ಪ್ರಮುಖರು ಸುಳಿಯುವುದಿಲ್ಲ. ಪಕ್ಷದ ಪರ ಪ್ರಚಾರ ನಡೆಸಿ ಎಂದು ಮನವಿ ಮಾಡುವುದಿಲ್ಲ. ಹೆಚ್ಚು-ಕಡಿಮೆ ಅವರು ಮನೆಯಲೇ ಏಕಾಂಗಿಯಾಗಿ ಪುಸ್ತಕ ಓದುತ್ತಾ ಸಮಯ ಕಳೆಯುತ್ತಾರೆ. ಬಿಜೆಪಿ ಸಂಸ್ಕøತಿ ಅವರಿಗೆ ಒಗ್ಗುತ್ತಿಲ್ಲ ಎನ್ನುತ್ತಾರೆ ಅವರ ಆಪ್ತರೊಬ್ಬರು.

ಈ ನಡುವೆ ಎಸ್.ಎಂ.ಕೃಷ್ಣ ಅವರು ತಮ್ಮ ಪುತ್ರಿ ಶಾಂಭವಿಗೆ ಬೆಂಗಳೂರಿನ ರಾಜರಾಜೇಶ್ವರಿನಗರ, ಇಲ್ಲವೇ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಇದನ್ನು ಅವರ ಆಪ್ತರು ಮಾತ್ರ ಒಪ್ಪುತ್ತಿಲ್ಲ.

ಎಸ್‍ಎಂಕೆ ರಾಜ್ಯದ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಯಾರೊಬ್ಬರೂ ಮರೆಯುವಂತಿಲ್ಲ. ಇದರಿಂದಲೇ ಬೆಂಗಳೂರಿಗೆ ವಿಶ್ವ ಭೂಪಟದಲ್ಲಿ ಪ್ರಮುಖ ಸ್ಥಾನ ದೊರೆಯಲು ಸಾಧ್ಯವಾಯಿತು. ಅಂತಹ ವರ್ಚಸ್ಸಿನ ನಾಯಕನನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಬಳಸಿ ಬಿಸಾಕಿದೆ ಎಂದು ಅನೇಕರು ದೂರುತ್ತಾರೆ.
ಈ ಬಗ್ಗೆ ಬಿಜೆಪಿ ನಾಯಕರು ಮಾತ್ರ ಹೇಳುವುದೇ ಬೇರೆ. ನಾವು ಯಾರನ್ನೂ ಕಡೆಗಣಿಸುವುದಿಲ್ಲ. ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಪಕ್ಷದೊಳಗೆ ಸೂಕ್ತ ಸ್ಥಾನಮಾನ ನೀಡುತ್ತೇನವೆ. ಎಸ್‍ಎಂಕೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಬಿಜೆಪಿ ನಾಯಕರೊಬ್ಬರು.
ಬಿಜೆಪಿ ಪರ ಎಸ್.ಎಂ.ಕೃಷ್ಣ ಪಾಂಚಜನ್ಯ ಮೊಳಗಿಸಲಿದ್ದಾರೆಯೇ, ಇಲ್ಲವೇ ಸದಾಶಿವನಗರದಲ್ಲಿ ತಮ್ಮಷ್ಟೆಕ್ಕೆ ತಾವೇ ಏಕಾಂಗಿಯಾಗಿ ಇರುವರೇ ಎಂಬುದೇ ಸದ್ಯಕ್ಕಿರುವ ಯಕ್ಷಪ್ರಶ್ನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ