ಬೆಂಗಳೂರು, ಏ.3-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್‍ಕುಮಾರ್ ಎಲ್ಲಿ ನಿಲ್ಲಬೇಕೆಂದು ಸೂಚಿಸುತ್ತಾರೋ ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಸಿದ್ಧ. ಬೇಡ ಎಂದರೆ ಪಕ್ಷಕ್ಕೆ ದುಡಿಯಲೂ ಸಿದ್ದನಾಗಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಾನು ಇಂತಹ ಕಡೆಯೇ ನಿಲ್ಲಬೇಕೆಂದು ಆಸೆ ಇಟ್ಟುಕೊಂಡಿಲ್ಲ. ಗೋವಿಂದರಾಜನಗರ, ವಿಜಯನಗರ ಇಲ್ಲವೇ ಹನೂರು ಸೇರಿದಂತೆ ಎಲ್ಲಿ ಬೇಕಾದರೂ ಸ್ಪರ್ಧಿಸಲು ಸಿದ್ದನಿದ್ದೇನೆ. ಯಡಿಯೂರಪ್ಪ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು. ಅನಂತ್‍ಕುಮಾರ್ ನಮ್ಮ ನಾಯಕರು. ಅವರ ತೀರ್ಮಾನದಂತೆ ನಾನು ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಷ್ಟಕಾಲದಲ್ಲಿದ್ದ ನನಗೆ ಬಿಜೆಪಿ ಪಕ್ಷ ಎಲ್ಲವೂ ನೀಡಿದೆ. ನನ್ನ ಸ್ವಾರ್ಥಕ್ಕಾಗಿ ಪಕ್ಷಕ್ಕೆ ನಾನು ಮೋಸ ಮಾಡಲಾರೆ. ವರಿಷ್ಠರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ನಮ್ಮೆಲ್ಲರ ಆಸೆ. ಕರ್ನಾಕಟದಿಂದ ಕಾಂಗ್ರೆಸ್ ಪಕ್ಷವನ್ನು ಮುಕ್ತಗೊಳಿಸಲು ನಾವೆಲ್ಲರೂ ಪಣತೊಟ್ಟಿದ್ದೇವೆ. ನನಗೆ ಎಲ್ಲೂ ನಿಲ್ಲದೆ ಪಕ್ಷಕ್ಕಾಗಿ ಪ್ರಚಾರ ನಡೆಸಿ ಎಂದು ವರಿಷ್ಠರು ಸೂಚಿಸಿದರೂ ಅದಕ್ಕೂ ಸಿದ್ದ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶಕೊಡುವುದಿಲ್ಲ ಎಂದು ಸೋಮಣ್ಣ ಪುನರುಚ್ಚರಿಸಿದರು.
ಗೋವಿಂರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳ ಜತೆ ಭಾನುವಾರ ಸಭೆ ಕರೆಯಲಾಗಿದೆ. ಅಂದು ನನ್ನ ನಿರ್ಧಾರ ಪ್ರಕಟಿಸಲಿದ್ದೇನೆ ಎಂದು ಹೇಳಿದರು.
ಅರಸೀಕೆರೆಗೆ ನನ್ನ ಮಗನನ್ನು ಕರೆದು ಯಡಿಯೂರಪ್ಪನವರೇ ಆ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದರು. ಅದರಂತೆ ಈಗಾಗಲೇ ನನ್ನ ಪುತ್ರ ಮನೆ ಮನೆಗೆ ತೆರಳಿ ಕಾರ್ಯಕರ್ತರ ಜತೆ ಕೆಲಸ ಮಾಡುತ್ತಿದ್ದಾನೆ. ಕೆಲವು ಕಾರಣಗಳಿಂದ ಅಲ್ಲಿ ಸಮಸ್ಯೆ ಉಂಟಾಗಿದೆ. ಅದನ್ನೂ ಯಡಿಯೂರಪ್ಪನವರೇ ಬಗೆಹರಿಸಬೇಕು. ಒಟ್ಟಿನಲ್ಲಿ ಬಿಎಸ್‍ವೈ ಹೇಳಿದಂತೆ ಕೆಲಸ ಮಾಡುವುದಾಗಿ ಹೇಳಿದರು.
ನನ್ನ ಮತ್ತು ಯಡಿಯೂರಪ್ಪನವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ನಮ್ಮ ಪಕ್ಷದ ಏಕೈಕ ಗುರಿ. ನನಗೆ ಯಾವುದೇ ಸಮಸ್ಯೆ ಬಂದರೂ ಚಿಂತೆಯಿಲ್ಲ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕೆ ದುಡಿಯುತ್ತೇವೆ ಎಂದರು.
ನಾನು ಎಂತಹ ಸಂದರ್ಭದಲ್ಲೂ ಪಕ್ಷ ಬಿಡುವ ಯೋಚನೆಯನ್ನು ಮಾಡಿಲ್ಲ. ನನ್ನ ರಾಜಕೀಯ ವಿರೋಧಿಗಳು ಇಂತಹ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅರಸೀಕೆರೆ, ವರುಣಾ, ಹನೂರು ಸೇರಿದಂತೆ ಪ್ರಚಾರಕ್ಕೆ ಕರೆದರೆ ನಾನು ಹೋಗಲು ಸಿದ್ದ. ರಾಜ್ಯದ ಯಾವುದೇ ಮೂಲೆಯಲ್ಲೂ ನಾನು ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷಕ್ಕೆ ನನ್ನಿಂದ ಯಾವುದೇ ಮುಜುಗರ ತರಲು ಇಷ್ಟಪಡುವುದಿಲ್ಲ. ಸೋಮಣ್ಣ ಏನೆಂಬುದು ನಮ್ಮ ನಾಯಕರಿಗೆ ಗೊತ್ತಿದೆ ಎಂದರು.
ಸಿದ್ದರಾಮಯ್ಯ ಅವರಿಂದ ಸಮುದಾಯ ಒಡೆಯುವ ಯತ್ನ:
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಯಾರೂ ಕೇಳದಿದ್ದರೂ ಲಿಂಗಾಯಿತ ಧರ್ಮಕ್ಕೆ ಧಾರ್ಮಿಕ ಸ್ಥಾನಮಾನ ನೀಡುವ ಕುರಿತಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಇದು ಧರ್ಮವನ್ನು ಒಡೆಯುವ ಉದ್ದೇಶದಿಂದಲೇ ಹೊರತು ಇದರಲ್ಲಿ ಯಾವುದೇ ಸಮಾಜದ ಏಳ್ಗೆ ಇಲ್ಲ ಎಂದು ಆರೋಪಿಸಿದರು.
ಲಿಂಗಾಯಿತ ಸಮುದಯಾವನ್ನು ಒಡೆಯುವ ಮೂಲಕ ಸಿದ್ದರಾಮಯ್ಯ ತಮ್ಮ ತಲೆಯ ಮೇಲೆ ಚಪ್ಪಡಿಕಲ್ಲು ಹಾಕಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಲಿಂಗಾಯಿತರು ಕಾಂಗ್ರೆಸ್‍ಗೆ ಬೆಂಬಲ ನೀಡುವುದಿಲ್ಲ. ಸಚಿವ ವಿನಯ್‍ಕುಲಕರ್ಣಿ ಇನ್ನೂ ಯುವಕ. ರಾಜಕೀಯದಲ್ಲಿ ಅವರು ಇನ್ನೂ ಸಾಕಷ್ಟು ಬೆಳೆಯಬೇಕು. ಕೆಲವರ ಮಾತು ಕಟ್ಟಿಕೊಂಡು ಈ ರೀತಿ ಮಾತನಾಡುತ್ತಿದ್ದಾರೆ. ವಾಸ್ತವ ಸ್ಥಿತಿ ಅರಿಯಲು ಹೆಚ್ಚು ದಿನ ಬೇಕಿಲ್ಲ ಎಂದು ಸೋಮಣ್ಣ ಹೇಳಿದರು.