ನಿಯಂತ್ರಣ ಕಳೆದುಕೊಂಡಿದ್ದ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಇಂದು ನಿರೀಕ್ಷೆಯಂತೆ, ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಮುಳುಗಿದೆ:

ಬೀಜಿಂಗ್, ಏ.2-ಕಾರ್ಯನಿರ್ವಹಣೆ ಸ್ಥಗಿತಗೊಂಡು ನಿಯಂತ್ರಣ ಕಳೆದುಕೊಂಡಿದ್ದ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ಇಂದು ನಿರೀಕ್ಷೆಯಂತೆ ಭೂಮಿಗೆ ಹಿಂದಿರುಗಿ ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಮುಳುಗಿದೆ. ಇದು ಧರೆಯ ಯಾವುದೇ ಭಾಗದಲ್ಲಿ ಅಪ್ಪಳಿಸಿ ಅನಾಹುತ ಸಂಭವಿಸುತ್ತದೆ ಎಂಬ ಬಗ್ಗೆ ಇದ್ದ ಆತಂಕ ಈಗ ನಿವಾರಣೆಯಾದಂತಾಗಿದೆ.
ಎಂಟು ಟನ್ ತೂಕದ ಟಯಾನ್‍ಗಾಂಗ್-1 ಬಾಹ್ಯಾಕಾಶ ಪ್ರಯೋಗಾಲವು ಭೂಮಿಗೆ ಹಿಂದಿರುಗುವಾಗ ಅಂತರಿಕ್ಷದಲ್ಲಿ ದಹನಗೊಂಡಿತು. ಅದರ ಅವಶೇಷಗಳು ಇಂದು ಬೆಳಗ್ಗೆ ಸ್ಥಳೀಯ ಕಾಲಮಾನ 8.15ರಲ್ಲಿ ದಕ್ಷಿಣ ಪೆಸಿಫಿಕ್‍ನಲ್ಲಿ ಮುಳುಗಿತು ಎಂದು ಚೀನಾದ ಬಾಹ್ಯಾಕಾಶ ಎಂಜಿನಿಯರಿಂಗ್ ಕಚೇರಿ ತಿಳಿಸಿದೆ.
ಭೂ ಕಕ್ಷೆ ಪ್ರವೇಶಿಸುವ ವೇಳೆ ಭಾರೀ ಘರ್ಷಣೆ ಮತ್ತು ತಾಪಮಾನದಿಂದ ಅದು ಧಗಧಗಿಸಿ ಸುಟ್ಟು ಹೋಯಿತು, ಹೀಗಾಗಿ ಭೂಮಿಗೆ ಅಪಾಯವಾಗಿಲ್ಲ ಎಂದು ಬೀಜಿಂಗ್ ಏರೋಸ್ಪೇಸ್ ಕಂಟ್ರೋಲ್ ಸೆಂಟರ್ ಅಂಡ್ ರಿಲವೆಂಟ್ ಆರ್ಗನೈಸೇಷನ್ ಅಧಿಕಾರಿಗಳು ಹೇಳಿದ್ದಾರೆ.
ಇದರಲ್ಲಿನ ಕೆಲವು ವಿಷಕಾರಿ ವಸ್ತುಗಳು ಜನವಸತಿ ಪ್ರದೇಶದ ಮೇಲೆ ಬಿದ್ದಿದ್ದರೆ ಅಪಾಯವಾಗುವ ಸಾಧ್ಯತೆ ಇತ್ತು. ಆದರೆ ನಿರ್ಜನ ಪೆಸಿಫಿಕ್ ಪ್ರಾಂತ್ಯದಲ್ಲಿ ಬಿದ್ದಿರುವುದರಿಂದ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಿಂದ ಅಮೆರಿಕದವರೆಗಿನ ಯಾವುದೇ ಪ್ರದೇಶದಲ್ಲಿ ಯಾವುದೇ ಸಮಯದಲ್ಲಿ ಇದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈ ಮುನ್ನ ಭಾನುವಾರ ಇದು ಇಳೆಗೆ ಬಡಿಯಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಚೀನಾ ಕಾಲಮಾನ ಭಾನುವಾರ ಮಧ್ಯಾಹ್ನದ ವೇಳೆಗೆ ಅದು ಭೂಮಿಯಿಂದ 179 ಕಿ.ಮೀ. ದೂರದಲ್ಲಿದೆ ಎಂಬುದು ಪತ್ತೆಯಾಗಿ ಸೋಮವಾರ ಬೆಳೆಗೆ ಭೂಮಿಯನ್ನು ತಲುಪಲಿದೆ ಎಂಬುದು ದೃಢಪಟ್ಟಿತ್ತು.
ಬಾಹ್ಯಾಕಾಶದಲ್ಲಿ ಶಾಶ್ವತ ಪ್ರಯೋಗಾಲಯ ಮತ್ತು ಸಂಶೋಧನ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ 29ನೇ ಸೆಪ್ಟೆಂಬರ್, 2011ರಲ್ಲಿ ಚೀನಾ ಪ್ರಾಯೋಗಿಕವಾಗಿ 8 ಟನ್ ತೂಕದ ಟಿಯಾನ್‍ಗಾಂಗ್-1 ಸ್ಪೇಸ್ ಲ್ಯಾಬ್‍ನನ್ನು ಹಾರಿಬಿಟ್ಟಿತ್ತು. ಇದು ಮಾರ್ಚ್ 2016ರಲ್ಲಿ ತನ್ನ ಸೇವೆಯನ್ನು ಪೂರ್ಣಗೊಳಿಸಿದ ಶೆನ್‍ಜೌ-8, 9 ಮತ್ತು 10 ಅಂತರಿಕ್ಷ ನೌಕೆಯಲ್ಲಿ ನೆಲೆಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ