ಬೆಂಗಳೂರು: ಇಂದಿನಿಂದ 2 ದಿನ ಮುಂಬೈ ಕರ್ನಾಟಕ ಭಾಗದಲ್ಲಿ ನಡೆಯಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರವಾಸ ದಿಢೀರ್ ಮುಂದೂಡಲಾಗಿದೆ.
ನಿಗದಿಯಂತೆ ಇಂದು ಬೆಳಗ್ಗೆ 9.30ರಿಂದ ಅಮಿತ್ ಶಾ ಪ್ರವಾಸ ಕಾರ್ಯ ಆರಂಭವಾಗಬೇಕಿತ್ತು. ಬೆಳಗಾವಿ, ಬಾಗಲಕೋಟೆ, ಹಾವೇರಿ, ವಿಜಯಪುರ ಜಿಲ್ಲೆಯಲ್ಲಿ ಈ ಎರಡು ದಿನದ ಪ್ರವಾಸ ನಿಗದಿಯಾಗಿತ್ತು. ಆದರೆ ಪ್ರವಾಸವನ್ನು ಏ. 12 ಮತ್ತು 13ಕ್ಕೆ ಮುಂದೂಡಲಾಗಿದೆ.
ರಾಜ್ಯಸಭೆಯಲ್ಲಿ ವಿಪಕ್ಷಗಳು ಇಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಮಂಡಿಸುವ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ತಮ್ಮ ಉಪಸ್ಥಿತಿ ಅನಿವಾರ್ಯ ಆಗಿರುವುದರಿಂದ ಪ್ರವಾಸ ಮುಂದೂಡಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಮಹಾಭಿಯೋಗ ಮಂಡಿಸಲಿದ್ದು, ಈ ಸಂದರ್ಭ ಶಾ ಉಪಸ್ಥಿತಿ ಅನಿವಾರ್ಯವಾಗಿದೆ. ಏಕೆಂದರೆ ರಾಜ್ಯಸಭೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸಂಖ್ಯಾಬಲ ಇಲ್ಲವಾಗಿರುವ ಕಾರಣ, ಪ್ರತಿಯೊಬ್ಬ ಸದಸ್ಯರ ಉಪಸ್ಥಿತಿಯೂ ಈಗ ಅಗತ್ಯ ಎನಿಸಿಕೊಂಡಿದೆ.
ಸಾಕಷ್ಟು ಸೂಕ್ಷ್ಮ ಪ್ರಕರಣಗಳಲ್ಲಿ ತಮಗೆ ಬೇಕಾದವರ ಪರ ತೀರ್ಪು ನೀಡುತ್ತಾರೆ. ಹಿರಿತನಕ್ಕೆ ಬೆಲೆ ಕೊಡುತ್ತಿಲ್ಲ, ಭ್ರಷ್ಟಾಚಾರ ನಡೆಸಿದ್ದಾರೆ ಎಂಬಿತ್ಯಾದಿ ಆರೋಪಗಳು ನ್ಯಾ. ದೀಪಕ್ ಮಿಶ್ರಾ ವಿರುದ್ಧ ಕೇಳಿ ಬಂದಿದೆ. ಮಹಾಭಿಯೋಗ ವಿರುದ್ಧ ಮತ ಚಲಾಯಿಸುವ ಅನಿವಾರ್ಯತೆ ಇದ್ದು, ಇಲ್ಲಿ ಬಿಜೆಪಿ ಕೈ ಮೇಲಾಗುವ ಅನಿವಾರ್ಯ ಕೂಡ ಇದೆ. ಇದರಿಂದ ಷಾ ಪ್ರವಾಸ ಮುಂದೂಡಿದ್ದಾರೆ ಎನ್ನಲಾಗಿದೆ.