ಸುಪ್ರೀಂನಿಂದ ಕಾವೇರಿ ವಿವಾದಕ್ಕೆ ಪರಿಹಾರದ ಭರವಸೆ

ಹೊಸದಿಲ್ಲಿ: ಕಾವೇರಿ ಜಲ ವಿವಾದ ಸಂಬಂಧ ಶೀಘ್ರವೇ ಪರಿಹಾರ ನೀಡುವ ಭರವಸೆಯನ್ನು ಸುಪ್ರೀಂ ಕೋರ್ಟ್ ನೀಡಿದೆ.

ಕಾವೇರಿ ಜಲ ವಿವಾದ ಸಂಬಂಧ ಫೆ.16ರಂದು ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, 6 ವಾರಗಳಲ್ಲಿ ಸ್ಕೀಂವೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ಸ್ಕೀಂ ರಚಿಸುವ ಸಂಬಂಧ 3 ತಿಂಗಳ ಕಾಲಾವಕಾಶ ಕೋರಿರುವ ಕೇಂದ್ರ ಸರ್ಕಾರ, ತೀರ್ಪಿನ ಬಗ್ಗೆ ಕೆಲವೊಂದು ಸ್ಪಷ್ಟನೆಗಳನ್ನೂ ಕೋರಿ ಸುಪ್ರೀಂಗೆ ಅರ್ಜಿಯನ್ನು ಸಲ್ಲಿಸಿದೆ.

ಈ ಮಧ್ಯೆ, ಸ್ಕೀಂ ಅನ್ನು ಕಾವೇರಿ ನಿರ್ವಹಣಾ ಮಂಡಳಿ ಎಂದು ಅರ್ಥೈಸಿಕೊಂಡಿರುವ ತಮಿಳುನಾಡು ಸರ್ಕಾರ, ಮಂಡಳಿ ರಚನೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಮಾ.29ಕ್ಕೆ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಉದ್ದೇಶಪೂರ್ವಕವಾಗಿ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಆರೋಪಿಸಿ ಅರ್ಜಿಯೊಂದನ್ನು ಸುಪ್ರೀಂಗೆ  ಸಲ್ಲಿಸಿತ್ತು.

ಈ ದಾವೆಗಳ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ಸಿಜೆಐ ದೀಪಕ್ ಮಿಶ್ರ ನೇತೃತ್ವದ ನ್ಯಾಯಪೀಠ, ನ್ಯಾಯಾಲಯಕ್ಕೆ ಸಮಸ್ಯೆ ಅರ್ಥವಾಗಿದೆ. ಈ ಸಂಬಂಧ ಒಂದು ವಿಶೇಷ ನ್ಯಾಯಪೀಠ ರಚನೆ ಮಾಡಲಾಗುತ್ತದೆ. ಏ.9ರಂದು ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿತು. ಮಾತ್ರವಲ್ಲದೇ ಪರಿಹಾರ ಒದಗಿಸುವ ಭರವಸೆಯನ್ನೂ ನೀಡಿತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ