ಶ್ರೀರಾಮುಲು -ಬಿ.ಎಸ್.ಯಡಿಯೂರಪ್ಪ ಭೇಟಿ: ಕುತೂಹಲಕ್ಕೆ ಎಡೆಮಾಡಿಕೊಥ್ಥ ಮಾತುಕತೆ

ಬೆಂಗಳೂರು, ಏ.2- ಬಳ್ಳಾರಿ ಸಂಸದ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧರೆಡ್ಡಿ ಪರಮಾಪ್ತ ಶ್ರೀರಾಮುಲು ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಡಾಲರ್ಸ್ ಕಾಲೋನಿಯ ದವಳಗಿರಿ ನಿವಾಸಕ್ಕೆ ಆಗಮಿಸಿದ ಶ್ರೀರಾಮುಲು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬಿಎಸ್‍ವೈ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ಅನೇಕ ವದಂತಿಗಳನ್ನು ಹುಟ್ಟುಹಾಕಿದೆ.

ಮೂರು ದಿನಗಳ ಹಿಂದೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಮ್ಮ ಪಕ್ಷಕ್ಕೂ ಜನಾರ್ಧನರೆಡ್ಡಿಗೂ ಯಾವುದೇ ಸಂಬಂಧವಿಲ್ಲ. ಸಮಾಜದಲ್ಲಿ ಸಚ್ಚಾರಿತ್ರ್ಯವಂತರಿಗೆ ಮಾತ್ರ ಟಿಕೆಟ್ ನೀಡುವುದಾಗಿ ಹೇಳಿದ್ದರು.
ಖುದ್ದು ರಾಷ್ಟ್ರೀಯ ಅಧ್ಯಕ್ಷರೇ ಈ ಹೇಳಿಕೆ ನೀಡಿದ್ದು, ಜನಾರ್ಧನರೆಡ್ಡಿ ಬೆಂಬಲಿಗರಿಗೆ ಭಾರೀ ನಿರಾಸೆ ಮೂಡಿಸಿತ್ತು. ಏಕೆಂದರೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ದುಮುಕುವುದರ ಜತೆಗೆ ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ, ಬೆಂಗಳೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದರು.

ಯಾವಾಗ ಅಮಿತ್ ಶಾ ಅವರೇ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳಿದ್ದು, ತೀವ್ರ ನಿರಾಸೆಯನ್ನುಂಟು ಮಾಡಿತ್ತು. ಶನಿವಾರ ಶ್ರೀರಾಮುಲು ಅವರು ಜನಾರ್ಧನರೆಡ್ಡಿ ಅವರನ್ನು ರಹಸ್ಯ ಸ್ಥಳದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಇಂದು ಯಡಿಯೂರಪ್ಪನವರನ್ನು ಭೇಟಿ ಮಾಡುವ ಮೂಲಕ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಜನಾರ್ಧನರೆಡ್ಡಿ ಪಕ್ಷದ ಪರ ಪ್ರಚಾರ ನಡೆಸಬೇಕೆ, ಬೇಡವೇ, ಈ ಬಗ್ಗೆ ಪಕ್ಷದ ನಿಲುವು ಸ್ಪಷ್ಟಪಡಿಸುವಂತೆ ಬಿಎಸ್‍ವೈ ಅವರನ್ನು ಕೇಳಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆ ನನ್ನನ್ನೂ ಸೇರಿದಂತೆ ರೆಡ್ಡಿ ಮತ್ತು ಅವರ ಕುಟುಂಬದವರು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ತೀವ್ರ ನಿರಾಸೆತಂದಿದೆ. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಶಾಸಕರಾದ ಆನಂದ್‍ಸಿಂಗ್, ಬಿ.ನಾಗೇಂದ್ರ ಕೂಡ ಜೈಲಿಗೆ ಹೋಗಿದ್ದರು. ಅಂತಹವರನ್ನೇ ಕಾಂಗ್ರೆಸ್, ಪಕ್ಷಕ್ಕೇ ಸೇರ್ಪಡೆ ಮಾಡಿಕೊಂಡಿದೆ.

ಜನಾರ್ಧನರೆಡ್ಡಿ ಮೇಲೆ ದಾಖಲಾಗಿರುವ ಅನೇಕ ಪ್ರಕರಣಗಳಿಗೆ ನ್ಯಾಯಾಲಯ ತಡೆಯಾಜ್ಞೆ ಕೊಟ್ಟಿದೆ. ಅಲ್ಲದೆ ಕೆಲವು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ವಾಸ್ತವ ಹೀಗಿರುವಾಗ ರೆಡ್ಡಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದರೆ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ಶ್ರೀರಾಮುಲು ಆತಂಕ ವ್ಯಕ್ತಪಡಿಸಿದ್ದಾರೆ.
ಕೇವಲ ಬೆಂಗಳೂರು ಅಲ್ಲದೆ, ರಾಜ್ಯದ ನಾನಾ ಕಡೆ ಜನಾರ್ಧನರೆಡ್ಡಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಬಿಜೆಪಿ ಬೆಳವಣಿಗೆಯಲ್ಲಿ ಅವರ ಪರಿಶ್ರಮ ಸಾಕಷ್ಟಿದೆ. ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ಬಿಜೆಪಿ ಆಪೆÇೀಷನ ಮಾಡಿದ್ದರಲ್ಲಿ ರೆಡ್ಡಿ ಪಾತ್ರವನ್ನು ಮರೆಯಲಾಗದು.
ತಮ್ಮದೇ ಆದ ವರ್ಚಸ್ಸು ಹೊಂದಿರುವ ಅವರನ್ನು ಪಕ್ಷದಿಂದ ದೂರವಿಡುವುದು ಸರಿಯಲ್ಲ ಎಂದು ಬಿಎಸ್‍ವೈಗೆ ಶ್ರೀರಾಮುಲು ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ ಜನಾರ್ಧನರೆಡ್ಡಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಳ್ಳಾರಿಗೆ ಬರುವಂತಿಲ್ಲ. ತೆರೆ ಮರೆಯಲ್ಲೇ ಕುಳಿತು ಅವರು ಪಕ್ಷದ ಪರ ಕೆಲಸ ಮಾಡುತ್ತಿದ್ದರು.
ರಾಷ್ಟ್ರೀಯ ಅಧ್ಯಕ್ಷರಿಗೆ ಕೆಲವರು ಸುಳ್ಳು ಮಾಹಿತಿಯನ್ನು ನೀಡಿರಬಹುದು. ಪಕ್ಷದ ಹಿರಿಯರಾದ ನೀವು ಈ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಶ್ರೀರಾಮುಲು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾಧಾನಪಡಿಸಿದ ಬಿಎಸ್‍ವೈ:
ಶ್ರೀರಾಮುಲು ಮಾತನ್ನು ಸಹನೆಯಿಂದ ಆಲಿಸಿದ ಬಿ.ಎಸ್.ಯಡಿಯೂರಪ್ಪ, ನೀವು ಅಮಿತ್‍ಶಾ ಅವರು ಆ ರೀತಿ ಹೇಳಿಕೆ ಕೊಟ್ಟಿದ್ದರಿಂದ ಆತಂಕಪಡುವ ಅಗತ್ಯವಿಲ್ಲ. ಜನಾರ್ಧನರೆಡ್ಡಿಯನ್ನು ಸಮರ್ಥಿಸಿಕೊಂಡರೆ ಚುನಾವಣೆಯಲ್ಲಿ ಹಿನ್ನಡೆಯಾಗಬೇಕಾಗತ್ತದೆ ಎಂಬ ಕಾರಣದಿಂದ ಆ ಅರ್ಥದಲ್ಲಿ ಹೇಳಿರಬಹುದು.

ಕಳಂಕಿತರಿಗೆ ಟಿಕೆಟ್ ಕೊಡದಿರಲು ಪಕ್ಷ ತೀರ್ಮಾನಿಸಿದೆ. ಅಂದ ಮಾತ್ರಕ್ಕೆ ರೆಡ್ಡಿ ಕುಟುಂಬವನ್ನು ದೂರವಿಟ್ಟಿಲ್ಲ. ಬಳ್ಳಾರಿ ನಗರದಿಂದ ಅವರ ಸಹೋದರ ಸೋಮಶೇಖರರೆಡ್ಡಿ, ಹರಪನಹಳ್ಳಿ ಕ್ಷೇತ್ರದಿಂದ ಅವರ ಮತ್ತೋರ್ವ ಸಹೋದರ ಕರುಣಾಕರರೆಡ್ಡಿಗೆ, ಆಪ್ತರಾಗಿರುವ ನಿಮಗೂ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಕೆಲವು ಕಾರಣಗಳಿಂದ ರೆಡ್ಡಿಯನ್ನು ದೂರವಿಟ್ಟಿರಬಹುದು. ಅವರ ಸಾಮಥ್ಯ, ಪಕ್ಷಕ್ಕೆ ನೀಡಿರುವ ಸೇವೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಅಭ್ಯರ್ಥಿಗಳ ಪರ ಚುನಾವಣೆಯಲ್ಲಿ ಏನು ಮಾಡಬೇಕೋ ಅದನ್ನು ಮಾಡಲು ಹೇಳಿ. ಉಳಿದಿದ್ದನ್ನು ನಾನು ನೋಡಿಕೊಳ್ಳುತ್ತೇನೆ. ಸಮಯ ಎಲ್ಲರಿಗೂ, ಎಲ್ಲ ರೀತಿಯಲ್ಲಿ ಒಂದೇ ಆಗಿರುವುದಿಲ್ಲ. ಈಗ ಕೆಟ್ಟ ಗಳಿಗೆ ಇರಬಹುದು. ಮುಂದೊಂದು ದಿನ ಖಂಡಿತ ಒಳ್ಳೆಯದೇ ಆಗುತ್ತದೆ. ಯಾರೊಬ್ಬರೂ ಆತಂಕ ಪಡಬಾರದು ಎಂಬ ಅಭಯ ಹಸ್ತ ನೀಡಿದ್ದಾರೆ.

ಸಾಧ್ಯವಾದರೆ ನಾನೇ ರೆಡ್ಡಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸುತ್ತೇನೆ. ಅವರ ಕೆಲಸವನ್ನು ಅವರು ಮುಂದುವರೆಸಲಿ. ಇದಕ್ಕೆ ಪಕ್ಷದಲ್ಲಿ ಯಾರ ಅಭ್ಯಂತರವೂ ಇಲ್ಲ ಎಂದು ಶ್ರೀರಾಮುಲುಗೆ ಸಮಾಧಾನಪಡಿಸಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ