ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದ್ದು, ಅದೇ ಕ್ಷೇತ್ರದಲ್ಲಿ ಕೊನೆ ಆಗುತ್ತದೆ: ಎಚ್.ಡಿ.ದೇವೇಗೌಡ ಭವಿಶ್ಯ

ಬೆಂಗಳೂರು, ಏ.2- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದ್ದು, ಅದೇ ಕ್ಷೇತ್ರದಲ್ಲಿ ಕೊನೆ ಆಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕುಮ್ಮಕ್ಕಿನಿಂದ 7 ಮಂದಿ ಮಾಜಿ ಶಾಸಕರು ಬಹಳಷ್ಟು ಆಟವಾಡಿದ್ದಾರೆ. ಚಾಮರಾಜಪೇಟೆ ಜನರು ಜಮೀರ್ ಅಹಮ್ಮದ್‍ಖಾನ್ ಅವರಿಗೆ ಅವಕಾಶ ಮಾಡಿಕೊಟ್ಟು ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವುದಾಗಿ ಹೇಳಿದರು.
ಜೆಡಿಎಸ್‍ನಿಂದ ರಾಜ್ಯಸಭೆ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಅವರನ್ನು ಬಲಿಪಶು ಮಾಡಲಾಯಿತು ಎಂದರು.
ಕಾಂಗ್ರೆಸ್ ತೊರೆದು ಇಂದು ಜೆಡಿಎಸ್‍ಗೆ ಅಲ್ತಾಫ್‍ಖಾನ್ ಮತ್ತು ಸಂಗಡಿಗರು ಜೆಡಿಎಸ್‍ಗೆ ಸೇರಿರುವುದು ಸಮಾಧಾನ ತಂದಿದೆ. ಅಲ್ತಾಫ್‍ಖಾನ್ ಒಂದು ಜಾತಿಯ ಮುಖಂಡರಲ್ಲ. ಚಾಮರಾಜಪೇಟೆಯಲ್ಲಿ ಎಲ್ಲರ ವಿಶ್ವಾಸಗಳಿಸಿದ್ದಾರೆ ಎಂದರು.

ಚಾಮರಾಜಪೇಟೆಯಲ್ಲಿ ಜಮೀರ್ ಅಹಮ್ಮದ್‍ಖಾನ್ ಅವರನ್ನು ಸೋಲಿಸುವ ವ್ಯಕ್ತಿಯೇ ಇಲ್ಲ ಎಂದು ಬಿಂಬಿಸಲಾಗುತ್ತಿತ್ತು. ಇದಕ್ಕೆ ಇಂದು ಉತ್ತರ ಸಿಕ್ಕಿದೆ. ಜಮೀರ್‍ನನ್ನು ಸೋಲಿಸುತ್ತೇನೆ ಎಂದು ಅಲ್ತಾಫ್‍ಖಾನ್ ಅವರು ಮುಂದೆ ಬಂದಿದ್ದಾರೆ ಎಂದು ಗೌಡರು ತಿಳಿಸಿದರು.

ಅಭ್ಯರ್ಥಿ ಘೋಷಣೆ:
ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಆ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನೇ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಏ.12 ಮತ್ತು 13ರಂದು ಆರ್.ಆರ್.ನಗರ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ದೇವೇಗೌಡರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ