ಬೆಂಗಳೂರು, ಏ.2- ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆಯುತ್ತಿದ್ದಂತೆ ಕಲಬುರ್ಗಿ ಜಿಲ್ಲೆಯ ಪ್ರಭಾವಿ ನಾಯಕ ಎಂ.ವೈ.ಪಾಟೀಲ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ನಾಯಕರು ನಡೆಸಿದ ಹಲವು ಸುತ್ತಿನ ಸಂಧಾನ ಸಭೆಗಳು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಎಂ.ವೈ.ಪಾಟೀಲ್ ಇಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಈ ಮೊದಲು ಅಫ್ಜಲ್ಪುರ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಸೋಲು ಕಂಡಿದ್ದರು. 2004ರಲ್ಲಿ ಜೆಡಿಎಸ್ನಿಂದ ಶಾಸಕರಾಗಿದ್ದರು.
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮುರಿದುಬಿದ್ದ ನಂತರ ಯಡಿಯೂರಪ್ಪ ಅವರ ಅನುಯಾಯಿಯಾಗಿ ಬಿಜೆಪಿ ಸೇರಿದ್ದ ಎಂ.ವೈ.ಪಾಟೀಲ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಸ್ಥಾಪಿಸಿದ್ದ ಕೆಜಿಪಿಯಿಂದ ಸ್ಪರ್ಧಿಸಿ ಮಾಲೀಕಯ್ಯ ಗುತ್ತೇದಾರ್ ಅವರ ವಿರುದ್ಧ ಪ್ರಬಲ ಸ್ಪರ್ಧೆ ನೀಡಿ 6ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.
ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರ್ಪಡೆ ಯಾಗುವುದನ್ನು ಎಂ.ವೈ.ಪಾಟೀಲ್ ಪ್ರಬಲವಾಗಿ ವಿರೋಧಿಸಿದ್ದರು. ಆದರೆ, ಬಿಜೆಪಿ ವರಿಷ್ಠರು ಪಾಟೀಲ್ ಅವರ ವಿರೋಧವನ್ನು ಲೆಕ್ಕಿಸದೇ ಇದ್ದುದ್ದರಿಂದ ಅಸಮಾಧಾನಗೊಂಡ ಎಂ.ವೈ.ಪಾಟೀಲ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಅಫ್ಜಲ್ಪುರ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸುವ ಇಚ್ಛಾಸಕ್ತಿಯನ್ನು ಎಂ.ವೈ.ಪಾಟೀಲ್ ಹೊಂದಿದ್ದಾರೆ.