ಬೆಂಗಳೂರು,ಏ.2-ಈ ಬಾರಿಯ ವಿಧಾನಸಭೆ ಚುನಾವಣೆ ಬಿಸಿ ಮದುವೆ ಸಮಾರಂಭಗಳಿಗೂ ತಟ್ಟಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡತ್ತಿರುವ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಮದುವೆ ಸಮಾರಂಭ ನಡೆಯುವ ಕಾರ್ಯಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು ಮದುವೆ, ಜಾತ್ರೆ ಸೇರಿದಂತೆ ಮತ್ತಿತರ ಸಮಾರಂಭದಲ್ಲಿ ಮತದಾರರಿಗೆ ಆಮಿಷವೊಡ್ಡಬಹುದೆಂಬ ಹಿನ್ನೆಲೆಯಲ್ಲಿ ಆಯೋಗ ಬಿಗಿಯಾದ ಕ್ರಮ ಕೈಗೊಂಡಿದೆ.
ಮದುವೆ ನಡೆಯುವ ಕಲ್ಯಾಣ ಮಂಟಪ, ಸಾಮೂಹಿಕ ವಿವಾಹ, ಜಾತ್ರೆ, ಸಮಾರಂಭಗಳ ಮೇಲೂ ಆಯೋಗ ಕಣ್ಣಿಟ್ಟಿದೆ. ಸಾಮಾನ್ಯವಾಗಿ ಮಾರ್ಚ್‍ನಿಂದ ಮೇ ಕೊನೆಯ ವಾರದವರೆಗೂ ಮದುವೆ ಕಾರ್ಯಕ್ರಮಗಳು ಎಗ್ಗಿಲ್ಲದೆ ನಡೆಯುತ್ತವೆ.
ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಆಕಾಂಕ್ಷಿಗಳು ಮದುವೆ ಕಾರ್ಯಕ್ರಮಗಳಿಗೆ ಹಣ ನೀಡುವ ಮೂಲಕ ಮತದಾರರಿಗೆ ಆಮಿಷವೊಡ್ಡುವುದು ಗುಟ್ಟಾಗಿ ಉಳಿದಿಲ್ಲ.
ಮದುವೆ ಊಟದ ಖರ್ಚನ್ನು ತಾವೇ ವಹಿಸಿಕೊಳ್ಳುವುದು, ಬಾಡೂಟ ಹಾಕಿಸುವುದು ಸರ್ವೆ ಸಾಮಾನ್ಯವಾಗಿದೆ. ಇದರಿಂದ ಮತದಾರರನ್ನು ಆಕರ್ಷಿಸಿದಂತಾಗುತ್ತದೆ ಎಂದು ಆಯೋಗದ ವಾದವಾಗಿದೆ. ಹೀಗಾಗಿ ಈ ಬಾರಿ ನಡೆಯುತ್ತಿರುವ ಮದುವೆ, ಜಾತ್ರೆಗಳ ಮೇಲೆ ರಹಸ್ಯವಾಗಿ ಕಣ್ಣಿಡಲಾಗಿದೆ.
ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯೊಬ್ಬರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಇದಕ್ಕಾಗಿ ತಮ್ಮ ಬೆಂಬಲಿಗರಿಗೆ ಭರ್ಜರಿ ಬಾಡೂಟವನ್ನು ಏರ್ಪಡಿಸಿದ್ದರು. ಕೊನೆಗೆ ಆಯೋಗ ಇಡೀ ಊಟವನ್ನೇ ಜಪ್ತಿ ಮಾಡಿತು.
ಇನ್ನು ಜಾತ್ರೆ ನಡೆಯುವ ಸಂದರ್ಭದಲ್ಲೂ ರಾಜಕಾರಣಿಗಳು ಗ್ರಾಮಗಳಿಗೆ ದಾನದ ರೂಪದಲ್ಲಿ ದೇವಸ್ಥಾನಗಳಿಗೆ ಉದಾರವಾಗಿ ಹಣ ನೀಡುವುದು ಕೂಡ ರೂಢಿಯಾಗಿದೆ.
ದೇವಸ್ಥಾನಗಳಿಗೆ ಜೀರ್ಣೋದ್ಧಾರದ ಹೆಸರಿನಲ್ಲಿ ಹಣ ನೀಡುವುದು, ಗ್ರಾಮಗಳಲ್ಲಿ ಕ್ರಿಕೆಟ್ ಟೂರ್ನಿ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಯುವ ಮತದಾರರಿಗೆ ಆಮಿಷವೊಡ್ಡುತ್ತಾರೆ. ಹೀಗೆ ರಾಜಕಾರಣಿಗಳು ಚಾಪೆ ಕೆಳಗೆ ತೂರಿದರೆ ಆಯೋಗ ರಂಗೋಲಿ ಕೆಳಗೆ ತೂರಲು ಸಜ್ಜಾಗಿದೆ.