ರಾಷ್ಟ್ರದ ಗಮನ ಸೆಳೆದಿರುವ ಕರ್ನಾಟಕದ 15ನೇ ವಿಧಾನಸಭೆ ಚುನಾವಣೆಗೆ ಅಖಾಡ ದಿನದಿಂದ ದಿನಕ್ಕೆ ಸಜ್ಜಾಗುತ್ತಿದೆ

ಬೆಂಗಳೂರು,ಏ.2- ರಾಷ್ಟ್ರದ ಗಮನ ಸೆಳೆದಿರುವ ಕರ್ನಾಟಕದ 15ನೇ ವಿಧಾನಸಭೆ ಚುನಾವಣೆಗೆ ಅಖಾಡ ದಿನದಿಂದ ದಿನಕ್ಕೆ ಸಜ್ಜಾಗುತ್ತಿದೆ.
ಹಿಂದೆಂದೂ ಕಾಣದಷ್ಟು ಬಿರುಸಿನ ಸ್ಪರ್ಧೆಗೆ ಸಾಕ್ಷಿಯಾಗಲಿರುವ ಈ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಆಗಲೇ ಮತ ಬೇಟೆಯನ್ನು ಆರಂಭಿಸಿವೆ.
ಮತದಾರನ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ರಾಜಕೀಯ ಪಕ್ಷಗಳು ಮಾತ್ರ ನಾವೇ ಗೆದ್ದೇ ಗೆಲ್ಲುತ್ತೇವೆ ಎಂಬ ಅದ್ಯಮ ವಿಶ್ವಾಸದಲ್ಲಿದ್ದಾರೆ.

ಈ ನಡುವೆ ಚುನಾವಣಾ ಆಯೋಗ ಕೂಡ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಟೊಂಕ ಕಟ್ಟಿ ನಿಂತಿದೆ. ಕಳೆದ ಬಾರಿಗಿಂತ ಹೆಚ್ಚಿನ ಶೇಕಡವಾರು ಮತದಾನ ನಡೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಹೆಚ್ಚುತ್ತಲೇ ಇರುವ ಸ್ಪರ್ಧಾಕಾಂಕ್ಷಿಗಳು:
ಒಟ್ಟು ಈವರೆಗೂ ನಡೆದಿರುವ 14 ವಿಧಾನಸಭಾ ಚುನಾವಣೆಗಳನ್ನು ಗಮನಿಸಿದರೆ ಪ್ರತಿ ಚುನಾವಣೆಯಿಂದ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ.
ಈ ಮೊದಲು ಜನರಿಗೆ ರಾಜಕೀಯ ಪ್ರಜ್ಞೆ ಕೊರತೆ ಇತ್ತು. ಸಾಮಾನ್ಯವಾಗಿ ರಾಜಕೀಯ ಎಂದರೆ ಬಹಳಷ್ಟು ಮಂದಿ ಮೂಗು ಮುರಿಯುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ವಿಜ್ಞಾನ, ತಂತ್ರಜ್ಞಾನ ಬೆಳೆದ ಪರಿಣಾಮ ಎಲ್ಲರಲ್ಲೂ ಜಾಗೃತಿ ಮೂಡುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣ ಬಂದ ಮೇಲಂತೂ ಜನರು ಪ್ರತಿಯೊಂದನ್ನು ಅಳೆದುತೂಗಿ ನೋಡುತ್ತಿದ್ದಾರೆ.

ಒಂದು ಕಾಲದಲ್ಲಿ ರಾಜಕೀಯದ ಸಹವಾಸವೇ ಬೇಡ ಎನ್ನುತ್ತಿದ್ದವರು ಇಂದು ತಾವು ಕೂಡ ಏಕೆ ಒಂದು ಕೈ ನೋಡಬಾರದೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಪರಿಣಾಮವೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 10ರಿಂದ 25ರವರೆಗೂ ಅಭ್ಯರ್ಥಿಗಳಿರುತ್ತಾರೆ.
1957ರಿಂದ 2013ರವರೆಗೆ ರಾಜ್ಯದಲ್ಲಿ ಎಷ್ಟು ವಿಧಾನಸಭಾ ಕ್ಷೇತ್ರಗಳಿದ್ದವು, ಒಟ್ಟು ಮತದಾರರು ಕಣದಲ್ಲಿದ್ದ ಸ್ಪರ್ಧಾಳುಗಳು, ಶೇಕಡವಾರು ಮತದಾನ, ಎಷ್ಟು ನಡೆದಿತ್ತು ಎಂಬುದರ ವಿವರ ಇಲ್ಲಿದೆ.

1957ರಲ್ಲಿ ಒಟ್ಟು 179 ವಿಧಾನಸಭಾ ಕ್ಷೇತ್ರಗಳಿದ್ದವು. ಇದರಲ್ಲಿ 151 ಸಾಮಾನ್ಯ, 27 ಪರಿಶಿಷ್ಟ ಜಾತಿ ಹಾಗೂ ಒಂದು ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು.
1,00,06,931 ಮತದಾರರು ಇದ್ದರೆ , 6,4,20,159 ಶೇ.51.30ರಷ್ಟು ಮತ ಚಲಾವಣೆಯಾಗಿತ್ತು. ಸ್ಪರ್ಧಾ ಕಣದಲ್ಲಿ ಒಟ್ಟು 585 ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದರು.

1957ರಲ್ಲಿ 179 ಕ್ಷೇತ್ರಗಳಿದ್ದರೆ 1962ರಲ್ಲಿ ಇದರ ಪ್ರಮಾಣ 208ಕ್ಕೆ ಏರಿಕೆಯಾಯಿತು. ಕೇವಲ 5 ವರ್ಷಗಳ ಅವಧಿಯಲ್ಲಿ ಹೊಸದಾಗಿ 29 ವಿಧಾನಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿದ್ದವು. ಇದರಲ್ಲಿ 180 ಸಾಮಾನ್ಯ, 27 ಪರಿಶಿಷ್ಟ ಜಾತಿ ಹಾಗೂ ಒಂದು ಎಸ್ಟಿ ಕ್ಷೇತ್ರಕ್ಕೆ ಮೀಸಲಾಗಿತ್ತು.
1957ರಲ್ಲಿ ಒಟ್ಟು 585 ಅಭ್ಯರ್ಥಿಗಳು ಕಣದಲ್ಲಿದ್ದರು. 1962ರಲ್ಲಿ 679 ಅಭ್ಯರ್ಥಿಗಳು ತಮ್ಮ ಭವಿಷ್ಯವನ್ನು ಪಣಕ್ಕಿಟ್ಟಿದ್ದರು. ಈ ವೇಳೆ 1,13,53,892 ಮತದಾರರು ಮತದಾನದ ಹಕ್ಕು ಹೊಂದಿದ್ದರು. ಒಟ್ಟು 66,99,286 ಶೇ.59.00ರಷ್ಟು ಮತದಾನವಾಗಿತ್ತು.
ವಿಶೇಷವೆಂದರೆ ಸ್ಪರ್ಧಿಸಿದ್ದ 30 ಮಹಿಳೆಯರಲ್ಲಿ 18 ಮಹಿಳೆಯರು ವಿಧಾನಸಭೆ ಪ್ರವೇಶಿಸಿದ್ದರು.

1967ರಲ್ಲಿ ಮತ್ತೆ 8 ವಿಧಾನಸಭಾ ಕ್ಷೇತ್ರಗಳು ಅಂದರೆ 216ಕ್ಕೆ ಏರಿಕೆಯಾದವು. ಈ ಬಾರಿಯೂ 1,26,69,162 ಮತದಾರರು ತಮ್ಮ ಹಕ್ಕು ಹೊಂದಿದ್ದರು. ಮತದಾನದ ವೇಳೆ ಒಟ್ಟು 79,94,419(ಶೇ.63.10) ಮತ ಚಲಾಯಿಸಿದ್ದರು. ಕಣದಲ್ಲಿ 727 ಅಭ್ಯರ್ಥಿಗಳಿದ್ದರು.
1972ರಲ್ಲಿ 216 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸುಮಾರು 24 ಲಕ್ಷಕ್ಕೂ ಅಧಿಕ ಮತದಾರರು ಹೊಸದಾಗಿ ಪಟ್ಟಿಗೆ ಸೇರ್ಪಡೆಯಾಗಿದ್ದರು. ಒಟ್ಟು 1, 50,84,388 ಮತದಾರರಲ್ಲಿ 92,86,839 (ಶೇ.61.57) ಹಕ್ಕು ಚಲಾಯಿಸಿದ್ದರು. ಸುಮಾರು 800 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
1978ರಲ್ಲಿ ಪುನಃ 8 ವಿಧಾನಸಭಾ ಕ್ಷೇತ್ರಗಳು ಅಂದರೆ 224ಕ್ಕೆ ಏರಿಕೆಯಾಯಿತು. ಈ ಬಾರಿ 1,79,13,358 ಮತದಾರರು ಇದ್ದರು. 5ನೇ ವಿಧಾನಸಭಾ ಚುನಾವಣೆಯಲ್ಲಿ 1,28,79, 969(ಶೇ.71.90) ಮತದಾನ ನಡೆದಿತ್ತು. ಈ ಚುನಾವಣೆಯಲ್ಲೂ 800 ಅಭ್ಯರ್ಥಿಗಳು ಇದ್ದರು.

ಆರನೇ ವಿಧಾನಸಭಾ ಚುನಾವಣೆಯಲ್ಲಿ ಅಂದರೆ 1983ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದ ಒಟ್ಟು ಮತದಾರರ ಪ್ರಮಾಣ ಮೊದಲ ಬಾರಿಗೆ ಎರಡು ಕೋಟಿ ದಾಟಿತ್ತು. ಈ ಚುನಾವಣೆಯಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದಂತೆ 2,01,72,133 ಮತದಾರರು ಇದ್ದರು. ಮತದಾನ ದಿನ ಒಟ್ಟು 13,2,46,269(ಶೇ.65.67) ಮತದಾನವಾಗಿತ್ತು. ಇದೇ ಮೊದಲ ಬಾರಿಗೆ ಕಣದಲ್ಲಿ 1365 ಆಕಾಂಕ್ಷಿಗಳಿದ್ದರು.
185ರಲ್ಲಿ ನಡೆದ 7ನೇ ವಿಧಾನಸಭಾ ಚುನಾವಣೆಗೆ ಮತದಾರರ ಸಂಖ್ಯೆ 2,22,81,366 ಮತದಾರರು ಇದ್ದರು. 1,49,84,698(ಶೇ.67.25) ಮತದಾನವಾಗಿದ್ದರೆ , ಸ್ಪರ್ಧೆಯಲ್ಲಿ 714 ಅಭ್ಯರ್ಥಿಗಳಿದ್ದರು.
1983ರಲ್ಲಿ ಜರುಗಿದ 8ನೇ ವಿಧಾನಸಭಾ ಚುನಾವಣೆ ಯಲ್ಲಿ 2,86,24,013 ಮತದಾರರಿದ್ದರೆ ಇದರಲ್ಲಿ 1,93,40,042(ಶೇ.67.67) ಮತದಾನವಾಗಿದ್ದರೆ ಕಣದಲ್ಲಿ 2043 ಅಭ್ಯರ್ಥಿಗಳಿದ್ದರು.

9ನೇ ವಿಧಾನಸಭೆ ಚುನಾವಣೆ ನಡೆದ 1974ರಲ್ಲಿ ರಾಜ್ಯದ ಒಟ್ಟು ಮತದಾರರ ಪ್ರಮಾಣ ಮೂರು ಕೋಟಿಗೂ ಅಧಿಕವಾಗಿತ್ತು. ಒಟ್ಟು 3,08,35,415(ಶೇ.68.59) ಮತದಾನವಾಗಿತ್ತು.
1999ರ 10ನೇ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಸಂಖೆ 3,42,84,098 ಮತದಾರರು ಹಕ್ಕು ಹೊಂದಿದ್ದರು. ಈ ಚುನಾವಣೆಯಲ್ಲಿ ಶೇ.65.65 ಅಂದರೆ 2, 31,94,283ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.

ಸ್ಫರ್ಧೆಯಲ್ಲಿ ಮಹಿಳೆಯರು, ಪುರುಷರು ಸೇರಿದಂತೆ 1341 ಅಭ್ಯರ್ಥಿಗಳು ಕಣದಲ್ಲಿದ್ದರು. 2014ರ 11ನೇ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 1715 ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದರು. 3,85,86,754 ಮತದಾರರ ಪೈಕಿ 2,50,88,438(ಶೇ.65.17) ಮತದಾನವಾಗಿತ್ತು.
2008ರಲ್ಲಿ ರಾಜ್ಯದ ಒಟ್ಟು ಮತದಾರರ ಪ್ರಮಾಣ ನಾಲ್ಕು ಕೋಟಿ ಗಡಿಯನ್ನು ದಾಟಿತ್ತು. ಅಂದರೆ ಆ ವರ್ಷ 4,03,63,725(ಶೇ.64.68) ಮತದಾನವಾಗಿತ್ತು.ಈ ವೇಳೆ 224 ಕ್ಷೇತ್ರಗಳಿಗೆ ವಿವಿಧ ಪಕ್ಷಗಳಿಂದ 2242 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

2013ರಲ್ಲಿ ಒಟ್ಟು ಮತದಾರರು 4,36,85,739 ಮಂದಿ ತಮ್ಮ ಹಕ್ಕು ಹೊಂದಿದ್ದರು. ಮತದಾನದ ವೇಳೆ 3,12,13,124(ಶೇ.71.45) ಮತದಾನವಾಗಿತ್ತು. ಈ ಸಂದರ್ಭದಲ್ಲಿ ದಾಖಲೆಯ ಅಂದರೆ 2948 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.
ಗಮನಿಸಬೇಕಾದ ಅಂಶವೆಂದರೆ ವರ್ಷದಿಂದ ವರ್ಷಕ್ಕೆ ಶೇಕಡವಾರು ಮತಪ್ರಮಾಣ ಕೆಲವು ವರ್ಷಗಳನ್ನು ಹೊರತುಪಡಿಸಿದರೆ ಏರಿಕೆಯಾಗುತ್ತಲೇ ಇದೆ.
ಮತ್ತೊಂದು ಅಂಶವೆಂದರೆ ಹಿಂದಿನ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚು ಸ್ಪರ್ಧಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಪ್ರಮಾಣ ಇಳಿಕೆಯಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ