ಬೆಂಗಳೂರು, ಏ.2- ಆಸ್ತಿ ತೆರಿಗೆ ಪಾವತಿ ಬಗ್ಗೆ ತಪ್ಪು ಮಾಹಿತಿ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ನೆ ಸಾಲಿನ ಆಸ್ತಿ ತೆರಿಗೆ ಪಾವತಿ ಕಾರ್ಯ ನಿನ್ನೆಯಿಂದಲೇ ಪ್ರಾರಂಭವಾಗಿದ್ದು, ತೆರಿಗೆದಾರರು ಆನ್ಲೈನ್ ಮೂಲಕ ತೆರಿಗೆ ಪಾವತಿಸುವಂತೆ ಮನವಿ ಮಾಡಲಾಗಿದೆ. ಆನ್ಲೈನ್ ದೋಷವನ್ನು ಸರಿಪಡಿಸಲಾಗಿದ್ದು, ಯಾವುದೇ ತೊಂದರೆ ಇರುವುದಿಲ್ಲ. ತೆರಿಗೆದಾರರು ಗೊಂದಲಗಳಿಲ್ಲದೆ ತೆರಿಗೆ ಪಾವತಿಸಬಹುದಾಗಿದೆ.
ಏಪ್ರಿಲ್ನಲ್ಲಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ವಿನಾಯಿತಿ ನೀಡಲಾಗುವುದು. ಯಾವುದೇ ಕಾರಣಕ್ಕೂ ವಿನಾಯಿತಿ ವಿಸ್ತರಣೆ ಇರುವುದಿಲ್ಲ. ಹಾಗಾಗಿ ಈ ತಿಂಗಳ ಅಂತ್ಯದೊಳಗೆ ತೆರಿಗೆದಾರರು ತೆರಿಗೆ ಪಾವತಿಸುವಂತೆ ಮನವಿ ಮಾಡಲಾಗಿದೆ. ವಿಶೇಷವಾಗಿ ಈ ಬಾರಿ ಫಾರಂ-5 ಮತ್ತು 6ನ್ನು ಕಡ್ಡಾಯ ಮಾಡಲಾಗಿದ್ದು, ಆಸ್ತಿ ಮಾಲೀಕರು ಎಷ್ಟು ಮನೆ ಬಾಡಿಗೆ ನೀಡಲಾಗಿದೆ, ಎಷ್ಟು ಬಾಡಿಗೆ ಸಂಗ್ರಹವಾಗುತ್ತಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡಬೇಕು. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಮೂಲ ತೆರಿಗೆಯಲ್ಲಿ ಎರಡು ಪಟ್ಟು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
2017-18ನೆ ಸಾಲಿನಲ್ಲಿ 2600 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ಇದರಲ್ಲಿ 2177 ಕೋಟಿ ತೆರಿಗೆ ಸಂಗ್ರಹವಾಗಿದೆ. ಆಸ್ತಿ ತೆರಿಗೆದಾರರ ಸಂಖ್ಯೆ ಈ ಬಾರಿ ನಗರದಲ್ಲಿ 18 ಲಕ್ಷಕ್ಕೆ ಹೆಚ್ಚಳವಾಗಿದ್ದು, ಪ್ರಸಕ್ತ ಸಾಲಿನಲ್ಲಿ 3300 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಚುನಾವಣೆ ನಡೆಯುತ್ತಿರುವುದರಿಂದ ಸಿಬ್ಬಂದಿಗಳ ಕೊರತೆ ಇದೆ. ಅದನ್ನೆಲ್ಲ ಸರಿದೂಗಿಸಿಕೊಂಡು ಸಮರ್ಪಕವಾಗಿ ತೆರಿಗೆ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.