ಹುಬ್ಬಳ್ಳಿ-ಮೈಸೂರು ನಡುವೆ ಸಂಚರಿಸುವ ಹಂಪಿ ಎಕ್ಸ್ ಪ್ರೆಸ್ ರೈಲು ವಿಳಂಬ ಕುರಿತು ನೈಋತ್ಯ ವಲಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ

ಬೆಂಗಳೂರು, ಏ.2- ಹುಬ್ಬಳ್ಳಿ-ಮೈಸೂರು ನಡುವೆ ಸಂಚರಿಸುವ ಹಂಪಿ ಎಕ್ಸ್ ಪ್ರೆಸ್ ರೈಲಿನ ವಿಳಂಬ ಹಾಗೂ ಮಾರ್ಗ ಬದಲಾವಣೆ ಆಗುತ್ತಿರುವ ತೊಂದರೆಯ ಬಗ್ಗೆ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅವರು ನೈಋತ್ಯ ವಲಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.

ಹುಬ್ಬಳ್ಳಿ-ಬಳ್ಳಾರಿ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ಹಂಪಿ ಎಕ್ಸ್‍ಪ್ರೆಸ್ ಬಹು ಉಪಯೋಗಿಯಾಗಿದ್ದು , ಆದರೆ ಕಳೆದ ಒಂದು ತಿಂಗಳಿನಿಂದ ಕಂಟೋನ್ಮೆಂಟ್ ಮಾರ್ಗದ ಬದಲಾಗಿ ಯಶವಂತಪುರ ಮಾರ್ಗವಾಗಿ ಬೆಂಗಳೂರು ತಲುಪುತ್ತಿರುವುದರಿಂದ ವಿಳಂಬವಾಗುತ್ತಿದೆ.
ಈ ಹಿಂದೆ ಹುಬ್ಬಳ್ಳಿಯಿಂದ ಸಂಜೆ 6.20ಕ್ಕೆ ಹೊರಟು ಬೆಂಗಳೂರನ್ನು ಮರು ದಿನ ಬೆಳಗ್ಗೆ 6 ಗಂಟೆಗೆ ತಲುಪುತ್ತಿದ್ದು , ಇದರಿಂದ ಕೇರಳ ಹಾಗೂ ತಮಿಳುನಾಡಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ.

ಆದರೆ ಈಗ ರೈಲು ಯಲಹಂಕ -ಯಶವಂತಪುರ-ಮಲ್ಲೇಶ್ವರಂ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬರುತ್ತಿದೆ. ಇದಲ್ಲದೆ ರೈಲು ಬೆಳಗ್ಗೆ 9.15ಕ್ಕೆ ಬೆಂಗಳೂರಿಗೆ ಬರುತ್ತಿದೆ. ಇದರಿಂದ ಸಾಕಷ್ಟು ವಿಳಂಬವಾಗುತ್ತಿದೆ. ಪ್ರಯಾಣಿಕರು ಬೇರೆ ರೈಲನ್ನು ಹತ್ತಲು ಕೂಡ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಗಮನ ಹರಿಸಿ ಪರಿಹರಿಸಬೇಕು ಮತ್ತು ಇದಕ್ಕೆ ಕಾರಣವನ್ನು ತಿಳಿಸಬೇಕು ಎಂದು ಕೆ.ಸಿ.ರಾಮಮೂರ್ತಿ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ